ಅಥಣಿ: ತಾಲೂಕಿನ ತಾಂವಶಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಪೋಲಿ ಯುವಕರ ಗುಂಪೊಂದು ಗ್ರಾಮಕ್ಕೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಸಂಜೆ ಸುಮಾರು 15 ಜನರ ಕಿಡಿಗೇಡಿಗಳ ಗುಂಪೊಂದು ಗ್ರಾಮಕ್ಕೆ ಪ್ರವೇಶಿಸಿ ಗಲಾಟೆ ಮಾಡಿದೆ. ಕೈಯಲ್ಲಿ ಕೋಲು, ಕಲ್ಲು, ಎಲೆಕ್ಟ್ರಿಕ್ ಲೈಟರ್‌ಗಳನ್ನು ಹಿಡಿದು ಪುಂಡಾಟ ಮೆರೆದಿದ್ದಾರೆ ಎಂದು ತಿಳಿದುಬಂದಿದೆ. ಈ ಹಲ್ಲೆಯಲ್ಲಿ ತಾಂವಶಿ ಗ್ರಾಮದ ಅಪ್ಪಾಸಾಬ ಸಿದ್ರಾಮ್ ಬಿಳ್ಳೂರ ಅವರ ತಲೆಗೆ ಗಂಭೀರ ಗಾಯಗಳಾಗಿವೆ.
ಇದಲ್ಲದೆ, ನಾಗರಾಜ್ ಬೆಳ್ಳಂಕಿ, ಅಶೋಕ್ ಕೆಂಚಗೌಡರ್, ಮತ್ತು ಮಲ್ಲಿಕಾರ್ಜುನ್ ಲಖಗೌಡರ್ ಅವರಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣವೇ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮಸ್ಥರಿಂದ ಕಿಡಿಗೇಡಿಗಳ ವಿರುದ್ಧ ಆರೋಪ
ಗ್ರಾಮಸ್ಥರ ಪ್ರಕಾರ, ಈ ಕಿಡಿಗೇಡಿಗಳು ತಾಂವಶಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಗ್ರಾಮದಲ್ಲಿ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸುವುದು, ಶಾಲಾ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುವುದು, ಮತ್ತು ಅಂಗಡಿ ವ್ಯಾಪಾರಸ್ಥರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನೆ ನಡೆದ ಕೂಡಲೇ ಪೊಲೀಸ್ ತುರ್ತು ಸೇವೆ 112 ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143