ಮೈಸೂರು: ಏಕಲ್ ಗ್ರಾಮೋಥಾನ್ ಫೌಂಡೇಶನ್‌ನ ಗದ್ದಿಗೆ ಸಮಗ್ರ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಜಿಲ್ಲೆಯ ಹುಣಸೂರು ತಾಲೂಕಿನ ಕರಿಮುದ್ದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ಗುರುತಿನ ಚೀಟಿ (ಐಡಿ ಕಾರ್ಡ್) ವಿತರಿಸಲಾಯಿತು. ಈ ಕಾರ್ಯಕ್ರಮವು ಸಂಸ್ಥೆಯ ಗ್ರಾಮೀಣಾಭಿವೃದ್ಧಿ ಮತ್ತು ಶೈಕ್ಷಣಿಕ ಉತ್ತೇಜನದ ಬದ್ಧತೆಯನ್ನು ಎತ್ತಿ ಹಿಡಿಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಏಕಲ್ ಗ್ರಾಮೋಥಾನ್ ಫೌಂಡೇಶನ್‌ನ ಅಧ್ಯಕ್ಷರಾದ ಕುಂಟೇ ಗೌಡರು, ಸಂಸ್ಥೆಯ ಯೋಜನೆಯ ಉದ್ದೇಶಗಳು, ಪಂಚಮುಖಿ ಶಿಕ್ಷಣದ ಮಹತ್ವ ಮತ್ತು ವಿದ್ಯಾರ್ಥಿ ಜೀವನದ ಮಹತ್ವದ ಬಗ್ಗೆ ಮೌಲ್ಯಾಧಾರಿತ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು. “ವಿದ್ಯಾರ್ಥಿ ಜೀವನವು ಭವಿಷ್ಯದ ಅಡಿಪಾಯವಾಗಿದ್ದು, ಉತ್ತಮ ಮೌಲ್ಯಗಳೊಂದಿಗೆ ಶಿಕ್ಷಣ ಪಡೆಯುವುದು ಅತ್ಯಗತ್ಯ” ಎಂದು ಅವರು ಒತ್ತಿ ಹೇಳಿದರು.
ನಂತರ ಮಾತನಾಡಿದ ರಾಜ್ಯ ಸಂಯೋಜಕರಾದ ಗೋವಿತ್ ಕಿರಣ್, ಗ್ರಾಮೀಣ ಭಾಗದ ಯುವಕ ಯುವತಿಯರಿಗಾಗಿ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಅಲ್ಲದೆ, ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ದೃಷ್ಟಿಯಿಂದ ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು. “ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿರುವ ನಮ್ಮ ಸಂಘಟನೆ, ಇಂದು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಐಡಿ ಕಾರ್ಡ್‌ಗಳನ್ನು ವಿತರಿಸುತ್ತಿದೆ” ಎಂದು ಅವರು ನುಡಿದರು.
ಗ್ರಾಮಸ್ಥರಾದ ಪ್ರೇಮ್ ಕುಮಾರ್ ಮಾತನಾಡಿ, “ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಶಿಕ್ಷಣದೊಂದಿಗೆ ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಈ ರೀತಿಯ ಸಂಘಸಂಸ್ಥೆಗಳು ಸರ್ಕಾರಿ ಶಾಲೆಯ ಉಳಿವಿಗಾಗಿ ಬಲವರ್ಧನೆ ಕಾರ್ಯಕ್ರಮಗಳನ್ನು ರೂಪಿಸುತ್ತವೆ” ಎಂದು ಶ್ಲಾಘಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಮಹದೇವು ಮಾತನಾಡಿ, “ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಮಹತ್ತರವಾದ ಕೊಡುಗೆ ಸೇವೆಯನ್ನು ನೀಡುತ್ತಿದೆ. ಇಂತಹ ಸಂಸ್ಥೆಗಳು ಸರ್ಕಾರಿ ಶಾಲೆಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಪೂರಕ ಕೆಲಸವನ್ನು ಮಾಡುತ್ತಿವೆ” ಎಂದು ಕೃತಜ್ಞತೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷರಾದ ಕುಂಟೇ ಗೌಡರು, ರಾಜ್ಯ ಸಂಯೋಜಕರಾದ ಗೋವಿತ್ ಕಿರಣ್, ಶಾಲೆಯ ಮುಖ್ಯ ಶಿಕ್ಷಕರಾದ ಮಹದೇವು, ಸಹಶಿಕ್ಷಕರು, ಕರಿಮುದ್ದನಹಳ್ಳಿ ಗ್ರಾಮಸ್ಥರಾದ ಪ್ರೇಮ್ ಕುಮಾರ್, ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಿಕ್ಷಕರು, ಗ್ರಾಮಸ್ಥರು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143