ಖಾನಾಪೂರ: ಪೊಲೀಸರು ನಾಲ್ಕು ವಿಭಿನ್ನ ಕಳ್ಳತನ ಪ್ರಕರಣಗಳನ್ನು ಭೇದಿಸಿ, ರೂ.14 ಲಕ್ಷ 90 ಸಾವಿರ ಮೌಲ್ಯದ ಮೋಟಾರ್‌ಸೈಕಲ್, ಕಾರು, ಕ್ಯಾಮೆರಾ, ಜೆಸಿಬಿ ಯಂತ್ರೋಪಕರಣ ಮತ್ತು ಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ಖಾನಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳ ತನಿಖೆಯನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವೈಜ್ಞಾನಿಕವಾಗಿ ನಡೆಸಿ ಪೊಲೀಸರು ಈ ಯಶಸ್ಸು ಸಾಧಿಸಿದ್ದಾರೆ.
ಜುಲೈ 2, 2025ರಂದು ಗರ್ಲಗುಂಜಿಯ ಮಹೇಶ್ ವಿಠ್ಠಲ್ ಕುಂಬಾರ ಅವರ ದೂರು ಆಧಾರವಾಗಿ ವಿದ್ಯಾನಗರದ ಗಣೇಶ ಕಾಲೋನಿಯಿಂದ ಕಳುವಾದ ರೂ.2.90 ಲಕ್ಷ ಮೌಲ್ಯದ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ವಶಪಡಿಸಿಕೊಳ್ಳಲಾಯಿತು. ಈ ಪ್ರಕರಣದಲ್ಲಿ ಜೋಯ್ಡಾದ ಸಮೀರ್ ಸೂರಜ್ ಪಾಟೀಲ್ ಬಂಧಿತನಾಗಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ ರೂ.3.60 ಲಕ್ಷ ಮೌಲ್ಯದ ಕ್ಯಾನನ್ ಕ್ಯಾಮೆರಾ ಹಾಗೂ ಲೆನ್ಸ್ ವಶವಾಗಿದೆ. ಇನ್ನೊಂದು ಪ್ರಕರಣದಲ್ಲಿ ರೂ.4.80 ಲಕ್ಷ ಮೌಲ್ಯದ ಜೆಸಿಬಿ ಬಿಡಿಭಾಗಗಳು ಮತ್ತು ಕಳ್ಳತನಕ್ಕೆ ಬಳಸಲಾದ ಟಾಟಾ ಏಸ್ ವಾಹನ ವಶಪಡಿಸಿಕೊಂಡಿದ್ದಾರೆ.
ಶೋಯಬ್ ರಫೀಕ್ ಮಾರಿಹಾಳ, ಶುಭಾನಿ ರಾಜೇಶ್ ತೋಲಗಿ, ಅತೀಫ್ ಸಲಾವುದ್ದೀನ್ ಸನದಿ ಹಾಗೂ ಅಜೀಜ್ ಬಾಷಾಸಾಬ ತಲ್ಲೂರ ಎಂಬ ನಾಲ್ವರನ್ನು ಈ ಪ್ರಕರಣಗಳಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಅದೇ ರೀತಿ, ಮಾರ್ಚ್ 4, 2025ರಂದು ವಡಗಾಂವ ಸೋನಾರ್ ಗಲ್ಲಿಯ ಸುನೀತಾ ವಿಷ್ಣು ಲೋಹರ್ ಅವರ ದೂರು ಆಧಾರವಾಗಿ, ಗಂಗ್ವಾಲಿ ಗ್ರಾಮ ಸಮೀಪ ಕಳುವಾದ ರೂ.4.50 ಲಕ್ಷ ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯನ್ನು ಬೈಲಹೊಂಗಲ ಡಿಎಸ್ಪಿ ವೀರಯ್ಯ ಮಠಪತಿ ಅವರ ಮಾರ್ಗದರ್ಶನದಲ್ಲಿ, ಖಾನಾಪೂರ ಪಿಎಸ್‌ಐ ಎಲ್.ಎಚ್.ಗೌಂಡಿ, ಉಪನಿರೀಕ್ಷಕ ಎಂ.ಬಿ.ಬಿರಾದಾರ್ ಹಾಗೂ ಎ.ಓ. ನಿರಂಜನ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಜಗದೀಶ್ ಕಾದ್ರೋಳ್ಳಿ, ಬಿ.ಜಿ.ಯಲಿಗಾರ ಮತ್ತು ಇತರರು ನಡೆಸಿದರು.
ಖಾನಾಪೂರ ಪೊಲೀಸರ ಈ ಸಾಧನೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಮೆಚ್ಚಿ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143