ಬೆಳಗಾವಿ, ಆಗಸ್ಟ್ 4: ತಾಂತ್ರಿಕ ಯುಗದಲ್ಲೂ ಅಂಧಶ್ರದ್ಧೆಗೆ ಕಡಿವಾಣವಿಲ್ಲ ಎಂಬುದನ್ನು ಸಾರುವ ರೀತಿಯಲ್ಲಿ ಬೆಳಗಾವಿ ಜಿಲ್ಲೆಯ ಯಳ್ಳೂರು ಗ್ರಾಮದಲ್ಲಿ ಇತ್ತೀಚೆಗೆ ವಿಶಿಷ್ಟ ರೀತಿಯ ವಾಮಾಚಾರ ನಡೆದಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಾಧಾರಣವಾಗಿ ಲಿಂಬೆಹಣ್ಣು, ಕುಂಕುಮ, ಅರಿಶಿಣ ಬಳಸಿ ವಾಮಾಚಾರ ಮಾಡುವ ಘಟನೆಗಳು ಸಾಮಾನ್ಯವಾದರೂ, ಈ ಬಾರಿ ಕಿಡಿಗೇಡಿಗಳು ನವೀನ ತಂತ್ರಜ್ಞಾನವನ್ನು ಬಳಸಿಕೊಂಡು ಮೊಬೈಲ್ ಮೂಲಕ ವಾಮಾಚಾರ ನಡೆಸಿದ್ದಾರೆ.
ಯಳ್ಳೂರು ಗ್ರಾಮದ ಹೊರವಲಯದಲ್ಲಿರುವ ಪಾಟೀಲ್ ಎಂಬುವವರ ಕೃಷಿ ಭೂಮಿಯಲ್ಲಿ ಈ ಘಟನೆ ನಡೆದಿದೆ. ಕಳೆದ ವಾರ ದುಷ್ಕರ್ಮಿಗಳು ಮೂಸಂಬಿ ಹಣ್ಣುಗಳನ್ನು ಬಳಸಿ ವಾಮಾಚಾರ ನಡೆಸಿದರೆ, ಇತ್ತೀಚೆಗೆ ಇಡೀ ಮೊಬೈಲ್ ಫೋನ್ವನ್ನೇ ವಾಮಾಚಾರಕ್ಕೆ ಬಳಸಿರುವುದು ಬೆಳಕಿಗೆ ಬಂದಿದೆ. ಹೊಸದಾದ ಒಪ್ಪೊ ಕಂಪನಿಯ ಸ್ಮಾರ್ಟ್ಫೋನ್ವೊಂದನ್ನು ಸ್ವಿಚ್ ಆಫ್ ಮಾಡಿರುವ ಸ್ಥಿತಿಯಲ್ಲಿ, ಲಿಂಬೆಹಣ್ಣು, ತೆಂಗಿನಕಾಯಿ, ಎಲೆ ಅಡಿಕೆ, ಹಾಗೂ ಕ್ಯಾರ್ಗಳೊಂದಿಗೆ ಒಂದೇ ಗುಂಡಿನಲ್ಲಿ ಇರಿಸಿ, ಗಿಡಕ್ಕೆ ಗಂಟು ಕಟ್ಟಿ ಹೋಗಲಾಗಿದೆ.
ಈ ಅಂಶಗಳು ಸ್ಥಳೀಯ ರೈತರು ಹಾಗೂ ಗ್ರಾಮದವರಲ್ಲಿ ಭೀತಿ ಮೂಡಿಸಿವೆ. ವಾಮಾಚಾರದ ಈ ತಾಂತ್ರಿಕ ಪ್ರಯೋಗ ಎಲ್ಲರಲ್ಲೂ ಅಚ್ಚರಿಯನ್ನೂ ಮೂಡಿಸಿದೆ. “ಮೊಬೈಲ್ ಬಳಸಿ ವಾಮಾಚಾರ ಮಾಡಲಾಗುತ್ತಿದೆ ಎಂಬುದು ನಂಬಲಾಗದ ವಿಷಯ. ಇದು ಗ್ರಾಮೀಣ ಜನರ ಮನಸ್ಸಿನಲ್ಲಿ ಆತಂಕ ಹುಟ್ಟಿಸುತ್ತಿದೆ,” ಎಂದು ಈ ವಿಷಯವನ್ನು ಬಹಿರಂಗಪಡಿಸಿದ ರೈತ ಮುಖಂಡ ರಾಜು ಮರವೆ ತಿಳಿಸಿದ್ದಾರೆ.
ಪೊಲೀಸರು ಈ ಸಂಬಂಧ ತನಿಖೆ ಪ್ರಾರಂಭಿಸಿದ್ದು, ಈ ರೀತಿಯ ಅಂಧಶ್ರದ್ಧೆ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143