ರಾಯಚೂರು: ವಾಮಾಚಾರಕ್ಕೆ ಬಳಸಿದ್ದ ತೆಂಗಿನಕಾಯಿಯನ್ನು ಉಪನ್ಯಾಸಕರೊಬ್ಬರು ತಿಂದ ಘಟನೆ ರಾಯಚೂರು ಪಟ್ಟಣದ ಮುದಗಲ್ಲ ರಸ್ತೆಯಲ್ಲಿನ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ವಾಮಾಚಾರಕ್ಕೆ ಬಳಸುವ ವಸ್ತುಗಳನ್ನು ನೋಡಿ ಭಯಪಡುವ ಈ ಕಾಲದಲ್ಲಿ ಉಪನ್ಯಾಸಕರೊಬ್ಬರು ಅದನ್ನು ತಿಂದು ಬಳಿಕ ಮೌಢ್ಯತೆ ಬಗೆಗೆ ಜಾಗೃತಿ ಮೂಡಿಸಿದರು.
ಅಶೋಕ ಸರಕಾರಿ ಕಾಲೇಜಿನ ಗೇಟಿಯಲ್ಲಿ ಯಾರೋ ತೆಂಗಿನಕಾಯಿ, ನಿಂಬೆ ಹಣ್ಣು, ಕುಂಕುಮವನ್ನಿಟ್ಟು ಹೋಗಿದ್ದರು. ಕಾಲೇಜಿನ ಸಮಯದಲ್ಲಿ ಅಲ್ಲಿಗೆ ಬಂದ ಉಪನ್ಯಾಸಕರು ಅದನ್ನು ನೋಡಿ ನಿಂಬೆಹಣ್ಣು ಕತ್ತರಿಸಿದ್ದು, ಅದರ ರಸ ಸವಿದರು. ತೆಂಗಿನಕಾಯಿ ಹೊಡೆದು ಎಲ್ಲಾ ಉಪನ್ಯಾಸಕ ಹಾಗೂ ಪ್ರಾಂಶುಪಾಲರು ತಿಂದು ಮೌಢ್ಯತೆಯ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ.
ಇಂತಹ ಪ್ರಕರಣಗಳು ಮುದಗಪ್ಪ ರಸ್ತೆಗಳಲ್ಲಿ ಹೆಚ್ಚಾಗಿದೆ. ಮುಂಜಾನೆ ವಾಯುವಿಹಾರಕ್ಕೆಂದು ತೆರಳುವ ಜನರು ಯುವಕರು ಇಂತಹ ವಾಮಾಚಾರ ಪರಿಕರಗಳು ಎಲ್ಲೆಡೆ ಬಿದ್ದಿರುವುದನ್ನು ನೋಡಿ ಭಯಗೊಳ್ಳುತ್ತಾರೆ. ಇಂತಹ ಕೃತ್ಯ ದಿನೇ ದಿನೇ ಹೆಚ್ಚುತ್ತಿದೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.