ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಗರ್ಭಿಣಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಚಿಕ್ಕೂಡ ಗ್ರಾಮದ ಮಹಿಳೆ ಸುವರ್ಣ ಮಾಂತಯ್ಯ ಮಠಪತಿ (೩೬) ಕೊಲೆಯಾದ ಗರ್ಭಿಣಿ. ಮಾಂತಯ್ಯ ಮತ್ತು ಸುವರ್ಣ ದಂಪತಿಗೆ ಈಗಾಗಲೇ ನಾಲ್ವರು ಮಕ್ಕಳಿದ್ದು, 5ನೇ ಮಗುವಿನ ನಿರೀಕ್ಷೆಯಲ್ಲಿದ್ದರು. ವೈದ್ಯರು ಡಿ.30ಕ್ಕೆ ಹೆರಿಗೆ ದಿನಾಂಕವನ್ನು ನೀಡಿದ್ದರು.
ಶುಕ್ರವಾರ ಮಧ್ಯಾಹ್ನ ಮಕ್ಕಳನ್ನು ಶಾಲೆಗೆ ಬಿಟ್ಟು ವಾಪಸ್ ಬರುವಾಗ ಮಾರ್ಗಮಧ್ಯದಲ್ಲಿ ಅಪರಿಚಿತರು ಕುಡಗೋಲಿನಿಂದ ತಲೆ, ಕುತ್ತಿಗೆ ಹಾಗೂ ಮುಖದ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುವರ್ಣ ಅವರನ್ನು ಆಕೆಯ ಪತಿ ಮಾಂತಯ್ಯ ಅವರೇ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ಅಷ್ಟರಲ್ಲಾಗಲೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.