ಭಾರತ ಬಹು ಧರ್ಮಿಯರ, ಬಹುಭಾಷಿಕರ ಹಾಗು ಬಹು ಸಂಸ್ಕೃತಿಯ ದೇಶವಾಗಿದ್ದರಿಂದ ಇಂದು ಧಾರ್ಮಿಕ ಭಾವೈಕ್ಯತೆಯ ಅವಶ್ಯಕತೆ ಇದೆ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಫಲವಾಗಿ ಇನ್ನೂ ಅಲ್ಲಲ್ಲಿ ಕೆಲ ಗಲಭೆ, ಜಾತಿ ಧರ್ಮದ ಹೆಸರಿನಲ್ಲಿ ಬಡಿದಾಟಗಳನ್ನು ಕಾಣಬಹುದು.ಆದರೆ ನಾವೆಲ್ಲರೂ ಒಂದೇ ಎನ್ನುವ ಮನೊಭಾವನೆ ಮೂಡಬೇಕು. ಜಾತಿ ಧರ್ಮದ ಹೆಸರಿನಲ್ಲಿ ನಮ್ಮ ನಮ್ಮಲ್ಲಿ ಭೇದ ಭಾವ ಮಾಡಬಾರದು ಎನ್ನುವುದಕ್ಕೆ ಈ ಚಿತ್ರ ಅರ್ಥ ಪೂರ್ಣ ಸಂದೇಶ ರವಾನಿಸಿದೆ. ಇಸ್ಲಾಂ ಸಮುದಾಯಕ್ಕೆ ಸೇರಿದ ಸಹೋದರಿ ಇಂದು ದೇಶಾದ್ಯಂತ ಆಚರಿಸಲ್ಪಡುತ್ತಿರುವ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ತನ್ನ ಮಗುವನ್ನು ಕರೆದೊಯ್ಯುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಾವೆಲ್ಲರೂ ದೇವರ ಸಂತಾನ. ಜಾತಿ, ಮತ, ಪಂಥ, ಭಾಷೆ, ಲಿಂಗ, ವರ್ಣ, ಎನ್ನದೇ ವಿಶ್ವವೇ ಒಂದು ಕುಂಟುಂಬ ಎಂದು ಅರಿತು ಭಾವೈಕ್ಯತೆಯ ನೀತಿಯನ್ನು ಅನುಸರಿಸಬೇಕಾಗಿದೆ ಮಾನವೀಯ ಮೌಲ್ಯ ಕಾಪಾಡಿ, ಸಾಮರಸ್ಯ ಜೀವನಕ್ಕೆ ಮಹತ್ವ ನೀಡಬೇಕು. ಎಲ್ಲ ಧರ್ಮದ ತಿರುಳು ಮಾನವೀಯ ಧರ್ಮ ಆಧರಿಸಿವೆ ದೇವನ ಕುಟುಂಬವಿದು ಎಂದು ಅರಿತು ನಡೆದರೆ ದೇಶ ಸುಭಿಕ್ಷವಾಗಿರುತ್ತದೆ.
ಭಾರತದಲ್ಲಿ ವಿಶಾಲ ರಾಷ್ಟ್ರಕ್ಕೆ ಹೊಂದುವಂತಹ ವಿಶಿಷ್ಟ ಸಂವಿಧಾನ ಹೊಂದಿದ್ದೇವೆ.ಈ ಸಂವಿಧಾನದ ದ್ರಷ್ಟಿಯಲ್ಲಿ ಬಡವ-ಬಲ್ಲಿದ ಎಲ್ಲರೂ ಸಮಾನರು.ಈ ಹಿನ್ನಲೆಯಲ್ಲಿಯೇ ಸ್ತ್ರೀ ಪುರುಷರೆಂಬ ಲಿಂಗ, ಜಾತಿ, ಭಾಷೆ, ಪ್ರಾಂತ, ಧರ್ಮ, ಆಹಾರ, ಉಡುಗೆ-ತೊಡುಗೆ, ರೀತಿ-ನೀತಿ, ಸಂಪ್ರದಾಯಗಳ ಭೇದವನ್ನೆಣಿಸದೇ ನಾವೆಲ್ಲಾ ಒಂದೇ ಎಂದು ಪರಿಗಣಿಸಿದ್ದಾರೆ. ಹಾಗೆಯೇ ನಮ್ಮ ಸಂವಿಧಾನ ಸಮಾಜವಾದ, ಸಮತಾವಾದ ತತ್ವಗಳನ್ನು ಒಪ್ಪಿಕೊಂಡಿದ್ದರೂ ಬಡವ ಶ್ರೀಮಂತರ ಮಧ್ಯ ದೊಡ್ಡ ಕಂದಕವೇ ಇದೆ. ಇದನ್ನು ಹೋಗಲಾಡಿಸಿ ರಾಷ್ತ್ರೀಯ ಏಕತೆಯನ್ನು ಪೋಷಿಸಲು ನಾವೆಲ್ಲರೂ ಕಟಿ ಬದ್ಧವಾಗೋಣ
ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು.
ಕಿರಣ ಚೌಗಲಾ, ಬೆಳಗಾವಿ