Live Stream

[ytplayer id=’22727′]

| Latest Version 8.0.1 |

Local NewsState News

ಶರ್ಮಿಷ್ಠೆಯಾಗಿ ಖ್ಯಾತ ನಟಿ ಉಮಾಶ್ರೀ  ಏಕವ್ಯಕ್ತಿ ನಾಟಕದಲ್ಲಿ ಅದ್ಭುತ ಅಭಿನಯ

ಶರ್ಮಿಷ್ಠೆಯಾಗಿ ಖ್ಯಾತ ನಟಿ ಉಮಾಶ್ರೀ  ಏಕವ್ಯಕ್ತಿ ನಾಟಕದಲ್ಲಿ ಅದ್ಭುತ ಅಭಿನಯ

ಬೆಳಗಾವಿ: ಖ್ಯಾತ ನಟಿ, ರಾಜಕಾರಣಿ ಉಮಾಶ್ರೀ ಶರ್ಮಿಷ್ಠೆ ಏಕವ್ಯಕ್ತಿ ನಾಟಕದಲ್ಲಿ ಅದ್ಭುತ ಅಭಿನಯ ನೀಡಿದರು. ನಗರದ ಕೋನವಾಳ ಬೀದಿಯ ಲೋಕಮಾನ್ಯ ರಂಗಮಂದಿರದಲ್ಲಿ ಜುಲೈ 5, ಶನಿವಾರದಂದು ಸಂಜೆ 6:30 ಕ್ಕೆ ರಂಗಸಂಪದ ಬೆಂಗಳೂರು ತಂಡವು ಪ್ರದರ್ಶಿಸಿದ ‘ಶರ್ಮಿಷ್ಠೆ’ ನಾಟಕವು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.2

ಸಂಜೆ, ಕಿಕ್ಕಿರಿದು ತುಂಬಿದ್ದ ರಂಗಮಂದಿರದಲ್ಲಿ, ಸಚಿವರಾಗಿ ಮತ್ತು ಚಲನಚಿತ್ರಗಳಲ್ಲಿನ ಅಭಿನಯದ ಮೂಲಕ ಕರ್ನಾಟಕದ ಜನರ ಮನ ಗೆದ್ದಿರುವ ಉಮಾಶ್ರೀಯವರು ಶರ್ಮಿಷ್ಠೆಯಾಗಿ ಜೀವ ತುಂಬಿದರು. ಅವರ ಅಭಿನಯದಲ್ಲಿನ ಹಾವಭಾವಗಳು ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದವು.

ಮೂಲ ಮರಾಠಿಯ ವಿ.ಎಸ್. ಖಾಂಡೇಕರ್ ಅವರ ‘ಯಯಾತಿ’ ಕಾದಂಬರಿಯನ್ನು ವಿ.ಎಂ. ಇನಾಮದಾರ್ ಕನ್ನಡಕ್ಕೆ ಅನುವಾದಿಸಿದ್ದು, ಇದನ್ನಾಧರಿಸಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಗಿರೀಶ್ ಕಾರ್ನಾಡ್ ರಚಿಸಿರುವ ‘ಯಯಾತಿ’ ನಾಟಕದ ಪ್ರಮುಖ ಪಾತ್ರವೇ ಶರ್ಮಿಷ್ಠೆ. ರಾಜಕುಮಾರಿಯಾಗಿದ್ದರೂ ದೇವಯಾನಿಗೆ ಸೇವಕಿಯಾಗಿ ದುಡಿಯುವ ಪ್ರಸಂಗ ಬಂದಾಗ ಶರ್ಮಿಷ್ಠೆಯ ಮನಸ್ಸಿನಲ್ಲಿ ಆಗುವ ತಳಮಳ ಮತ್ತು ಹೆಣ್ಣಾಗಿ ಅನುಭವಿಸುವ ನೋವುಗಳು ಈ ನಾಟಕದ ಕಥಾವಸ್ತುವಾಗಿದೆ.

ಈ ಅಪರೂಪದ ಏಕವ್ಯಕ್ತಿ ರಂಗ ಪ್ರಯೋಗವನ್ನು ಕರ್ನಾಟಕದ ಉದಯೋನ್ಮುಖ ನಾಟಕಕಾರರಾದ ಬೇಲೂರು ರಘುನಂದನ್ ರಚಿಸಿದ್ದಾರೆ. ಕರ್ನಾಟಕದ ಪ್ರಸಿದ್ಧ ರಂಗ ನಿರ್ದೇಶಕರೂ, ಮೈಸೂರು ರಂಗಾಯಣದ ಮಾಜಿ ನಿರ್ದೇಶಕರೂ ಹಾಗೂ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರೂ ಆದ ಚಿದಂಬರರಾವ್ ಜಂಬೆ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಅನುಷ್ ಶೆಟ್ಟಿಯವರ ಸಂಗೀತ, ಪ್ರಮೋದ್ ಶಿಗ್ಗಾವ್ ಅವರ ವಸ್ತ್ರವಿನ್ಯಾಸ, ರಂಗ ಸಜ್ಜಿಕೆ ಮತ್ತು ರಂಗ ಪರಿಕರಗಳ ನಿರ್ವಹಣೆ ನಾಟಕಕ್ಕೆ ಮೆರುಗು ನೀಡಿದವು.

ಈ ಸಂದರ್ಭದಲ್ಲಿ, ಕಲಾವಿದೆ ಉಮಾಶ್ರೀಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಾಸ್ತಾವಿಕ ನುಡಿಗಳನ್ನಾಡಿದ ರಂಗಸಂಪದದ ಅಧ್ಯಕ್ಷರು, “ಇಂದು ನಾಟಕ ನೋಡುವ ಪ್ರೇಕ್ಷಕರ ಕೊರತೆಯಿಲ್ಲ. ಸರಿಯಾದ ಸಮಯ ಕಾಪಾಡಿಕೊಂಡು, ಒಳ್ಳೆಯ ನಾಟಕಗಳನ್ನು ನೀಡಿದರೆ ಪ್ರೇಕ್ಷಕರು ಖಂಡಿತ ಬರುತ್ತಾರೆ. ಇದಕ್ಕೆ ಇಂದು ಕಿಕ್ಕಿರಿದು ತುಂಬಿದ ರಂಗಮಂದಿರವೇ ಸಾಕ್ಷಿ” ಎಂದು ಹೇಳಿದರು.

ಡಾ. ಬಸವರಾಜ ಜಗಜಂಪಿ, ಪ್ರೊ. ಎಂ.ಎಸ್. ಇಂಚಲ, ಎಲ್.ಎಸ್. ಶಾಸ್ತ್ರಿ, ಜಯಂತ ಜೋಶಿ, ಡಾ. ಸರಜು ಕಾಟ್ಕರ್, ರವಿ ಭಜಂತ್ರಿ, ಸುರೇಖಾ ದೇಸಾಯಿ, ಜ್ಯೋತಿ ಬದಾಮಿ, ರಾಮಚಂದ್ರ ಕಟ್ಟಿ, ಗುರುನಾಥ ಕುಲಕರ್ಣಿ, ಪ್ರಸಾದ ಕಾರಜೋಳ, ಅನಂತ ಪಪ್ಪು, ಶ್ರೀಮತಿ ಪದ್ಮಾ ಕುಲಕರ್ಣಿ, ಯೋಗೇಶ ದೇಶಪಾಂಡೆ, ಚಿದಾನಂದ ವಾಳ್ಕೆ, ವಿನೋದ ಸಪ್ಪಣ್ಣವರ, ಎ.ಎಂ. ಕುಲಕರ್ಣಿ ಸೇರಿದಂತೆ ರಂಗಸಂಪದದ ಪದಾಧಿಕಾರಿಗಳು ಹಾಗೂ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";