ಬೆಳಗಾವಿ: ಜಿಲ್ಲೆಯ ಕಣಕುಂಬಿ ಬಳಿಯ ಖಾಸಗಿ ರೆಸಾರ್ಟ್‌ನಲ್ಲಿ ಇಂತಹದೊಂದು ಭಯಾನಕ ಘಟನೆ ನಡೆದಿದೆ. ನಿನ್ನೆ ಸಂಜೆ ಎಲ್‌ಜಿ ಕಂಪನಿಯ ಬೆಳಗಾವಿ ಶಾಖೆಯ 22 ಜನ ಸಿಬ್ಬಂದಿ ಈ ರೆಸಾರ್ಟ್ ಪಾರ್ಟಿ ಮಾಡಲು ತೆರಳಿದ್ದರು. 26 ವರ್ಷದ ಮಹಾಂತೇಶ ಗುಂಜೀಕರ ಎಂಬ ಯುವಕ, ಅಲ್ಲಿನ ಈಜುಕೊಳದಲ್ಲಿ ಇಳಿದಿದ್ದಾಗ ಮಹಾಂತೇಶ ಪ್ರಾಣ ಬಿಟ್ಟಿದ್ದಾನೆ.
ಬದುಕು ನಶ್ವರ ಅನ್ನೋ ಮಾತು ಎಂದೆಂದಿಗೂ ಜೀವಂತ. ವಿಧಿಯ ಕೈವಾಡ ಯಾವಾಗ ಏನು ಬೇಕಾದರೂ ನಡೆಯಬಹುದು. ಈಜುಕೊಳದಲ್ಲಿ ಹಾಡುತ್ತಾ, ಕುಣಿಯುತ್ತಾ ಖುಷಿಯಲ್ಲಿ ತೇಲಾಡುತ್ತಿದ್ದಾಗ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಸಹದ್ಯೋಗಿಗಳೊಂದಿಗೆ ಮಸ್ತ್ ಪಾರ್ಟಿ ಮಾಡುತ್ತಿದ್ದ ಯುವಕ ದಾರುಣ ಅಂತ್ಯ ಕಂಡಿದ್ದಾನೆ.
ನಿನ್ನೆ ಸಂಜೆ ಖಾಸಗಿ ರೆಸಾರ್ಟ್‌ಗೆ ತೆರಳಿದ್ದ ಮಹಾಂತೇಶ ಇಂದು ಮನೆಗೆ ವಾಪಸ್ ಬರಬೇಕಿತ್ತು. ಆದರೆ ಬೆಳಗ್ಗೆ ಈಜುಕೊಳದಲ್ಲಿ ಇಳಿದಿದ್ದ ಮಹಾಂತೇಶ ಗುಂಜೀಕರ ಉಸಿರು ನಿಲ್ಲಿಸಿದ್ದಾನೆ. ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಮೃತದೇಹವನ್ನ ತರಲಾಗಿತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗಾವಿಯ ಖಾಸಭಾಗ ನಿವಾಸಿ ಮಹಾಂತೇಶ ಗುಂಜೀಕರ ತನ್ನ ಕಂಪನಿಯ ಸ್ನೇಹಿತರ ಜೊತೆ ಪಾರ್ಟಿ ಮಾಡಲು ಹೋಗಿದ್ದ. ಇನ್ನೆರಡು ತಿಂಗಳು ಅಂದ್ರೆ ಫೆಬ್ರವರಿಯಲ್ಲಿ ಮಹಾಂತೇಶ ಸಹೋದರಿ ಮದುವೆಗೆ ಸಿದ್ಧತೆ ಮಾಡಿಕೊಳ್ತಿದ್ದ ಎನ್ನಲಾಗಿದೆ.