ಬೆಳಗಾವಿ: ಜಿಲ್ಲೆಯ ಹತ್ತರಗಿ ಟೋಲ್ ಪ್ಲಾಜಾದಲ್ಲಿ ಪ್ರಾದೇಶಿಕ ಸಾರಿಗೆ ಆಯುಕ್ತರಾದ ಓಂಕಾರೇಶ್ವರಿ ಅವರು ಅಭಯ ಯೋಜನೆಯನ್ನು ಉದ್ಘಾಟಿಸಿದರು.
ಭಾರಿ ವಾಹನ ಚಾಲಕರ ಆರೋಗ್ಯ ತಪಾಸಣೆಗಾಗಿ ಇರುವಂತಹ ಅಭಯ ಪ್ರೋಜೆಕ್ಟ್ ಉದ್ಘಾಟನೆಯನ್ನು ಅಕ್ಟೋಬರ್ 8, 2024 ರಂದು ಪ್ರಾದೇಶಿಕ ಸಾರಿಗೆ ಆಯುಕ್ತರಾದ ಓಂಕಾರೇಶ್ವರಿ ಅವರಿಂದ ಮಾಡಲಾಯಿತು.
ಉದ್ಘಾಟನೆಯ ನಂತರ ದಿನನಿತ್ಯ ಅಗತ್ಯ ಸರಕುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಲಾರಿ ಚಾಲಕರು ದೇಶದ ಆರ್ಥಿಕತೆಗೆ ಅನನ್ಯ ಕೊಡುಗೆ ನೀಡುತ್ತಾರೆ. ಅವರ ಗೌರವಯುತ ಬದುಕಿಗೆ ನಾವೆಲ್ಲ ಶ್ರಮಿಸಬೇಕಾಗಿದೆ. ಲಾರಿ ಚಾಲಕರ ದೃಷ್ಠಿ ಮತ್ತು ಯೋಗಕ್ಷೇಮಕ್ಕಾಗಿ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ “ಅಭಯ” ಯೋಜನೆಯ ಲಾಭ ಪಡೆದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಭಾಗೀಯ ಸಾರಿಗೆ ಆಯುಕ್ತರಾದ ಎಂ.ಓಂಕಾರೇಶ್ವರಿಯವರು ಲಾರಿ ಚಾಲಕರಿಗೆ ಸಲಹೆ ನೀಡಿದರು.
ಭಾರತ ಸರಕಾರದ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯ, ಆಯ್.ಆಯ್.ಟಿ. ನವದೆಹಲಿ, ಪೋರಸೈಟ ಸಂಸ್ಥೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಜಂಟಿಯಾಗಿ, ಪ್ರಾಯೋಗಿಕವಾಗಿ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ ಪ್ಲಾಜಾದಲ್ಲಿ ಜಾರಿಗೆ ತಂದಿರುವ “ಅಭಯ” ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.
ಆಯ್.ಆಯ್.ಟಿ. ನವದೆಹಲಿಯ ಪ್ರಾಜೆಕ್ಟ ಕೋಆರ್ಡಿನೇಟ್ರ ಹೊನ್ನು ಮಾತನಾಡಿ ಅಭಯ ಯೋಜನೆಯಡಿ ಲಾರಿ ಚಾಲಕರ ಅಭಿವೃದ್ಧಿ ದೃಷ್ಠಿಯಿಂದ ಆರೋಗ್ಯ ತಪಾಸಣೆ, ಕೌನ್ಸಿಲಿಂಗ, ಆರೋಗ್ಯ ವಿಮೆ, ಕಣ್ಣು ಪರೀಕ್ಷೆ ಮತ್ತು ಅಗತ್ಯವಿದ್ದವರಿಗೆ ಕನ್ನಡಕಗಳನ್ನು ವಿತರಿಸಲಾಗುತ್ತಿದೆ ಎಂದರು. ಈ ಯೋಜನೆಯು ಪ್ರಾರಂಭದಲ್ಲಿ 45 ದಿನಗಳ ವರೆಗೆ ನಡೆಯುವುದು. ಅಗತ್ಯತೆಗನುಸಾರವಾಗಿ ಈ ಯೋಜನೆಯನ್ನು ಮುಂದುವರೆಸಲಾಗುವುದು.
ಟೋಲ ಪ್ಲಾಜಾದ ಪ್ರೋಜೆಕ್ಟ ಮ್ಯಾನೆಜರ ರವೀಂದ್ರನ್ ಮಾತನಾಡಿ ರಸ್ತೆ ಬಳಕೆಗಾಗಿ ಶುಲ್ಕ ಸಂಗ್ರಹಣೆ ಜೊತೆಗೆ ಹೆದ್ದಾರಿ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಕಾರ್ಯಕ್ರಮಗಳ ಆಯೋಜನೆಗೆ ರಾಷ್ಟ್ರೀಯ ಹೆದ್ದಾರಿ ಟ್ರಸ್ಟ ಸದಾ ಸಿದ್ದವಾಗಿದೆ ಎಂದರು.
ಈ ಸಂದರ್ಭದಲ್ಲಿ, ಪೋರಸೈಟ ಸಂಸ್ಥೆಯ ಅಜಯ, ಮ್ಯಾನೇಜರ ಬ್ರಿಜೆಶ ಸಿಂಗ್, ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಮತಿ.ವೈಜಯಂತಿ ಚೌಗಲಾ, ಖಜಾಂಚಿ ಶ್ರೀಮತಿ. ಸುಲೋಚನಾ ಭಟ್ಟ, ಸದಸ್ಯರಾದ ಶ್ರೀಮತಿ ವಿದ್ಯಾಲತಾ ಹೆಗಡೆ, ಅಸ್ಮೀತ ಫೌಂಡೇಶನ ಶಿರಸಿಯ ರಿಯಾಜ್ ಉಪಸ್ಥಿತರಿದ್ದರು.