ಗೌಹಾತಿ (ಅಸ್ಸಾಂ): ಅಖಿಲ ಭಾರತ ಕವಯತ್ರಿಯರ ಪರಿಷತ್ (AIPC) ತನ್ನ ರಜತ ಮಹೋತ್ಸವ ವರ್ಷಾಚರಣೆಯ 25ನೇ ರಾಷ್ಟ್ರೀಯ ಕವಯತ್ರಿ ಸಮ್ಮೇಳನವನ್ನು ಈ ಬಾರಿ ಅಸ್ಸಾಂ ರಾಜ್ಯದ ಗೌಹಾತಿಯಲ್ಲಿ ನವೆಂಬರ್ 21, 22 ಹಾಗೂ 23 ರಂದು ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಜ್ಜಾಗಿದೆ.
ಈ ಸಮ್ಮೇಳನದಲ್ಲಿ ಬೆಳಗಾವಿಯಿಂದ 25 ಕವಯತ್ರಿಯರು ಭಾಗವಹಿಸುತ್ತಿರುವುದು ವಿಶೇಷ ಆಕರ್ಷಣೆಯಾಗಿದೆ.
ಮೂರು ದಿನಗಳ ಸಮ್ಮೇಳನದಲ್ಲಿ ಸಂಶೋಧನಾ ಪ್ರಬಂಧ ಮಂಡನೆ, ಬಹುಭಾಷಾ ಕವಿಗೋಷ್ಠಿ, ಕನ್ನಡ ಭಾಷಾ ಕವಿಗೋಷ್ಠಿ, ಸುಮಾರು 80 ಕ್ಕೂ ಹೆಚ್ಚು ಪ್ರಶಸ್ತಿ ಪ್ರದಾನಗಳು, ಹಾಗೂ ವಿವಿಧ ರಾಜ್ಯಗಳ ಕವಯತ್ರಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ ಅಸ್ಸಾಂ ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗು ಇತರೆ ಗಣ್ಯರು ಭಾಗವಹಿಸಲಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಎಲ್ಲ ರಾಜ್ಯಗಳ ಎಐಪಿಸಿ ಸಹೋದರಿಯರು ಈ ಅಪರೂಪದ ಕಾವ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಬೆಳಗಾವಿಯಿಂದ ಭಾಗವಹಿಸುತ್ತಿರುವ ಪ್ರಮುಖ ಎಐಪಿಸಿ ಸದಸ್ಯೆಯರಲ್ಲಿ:
ರಾಷ್ಟ್ರೀಯ ಉಪಾಧ್ಯಕ್ಷೆ ಜ್ಯೋತಿ ಬದಾಮಿ, ಸಮಿತಿ ಸದಸ್ಯೆ ಶೈಲಜಾ ಕುಲಕರ್ಣಿ, ರಾಜನಂದಾ ಗಾರ್ಗಿ, ಹಿರಿಯ ಸದಸ್ಯೆ ಸುನಂದಾ ಮುಳೆ, ಶಕುಂತಲಾ ಬಾಳೆಕುಂದ್ರಿ, ಸುಧಾ ಪಾಟೀಲ, ಜ್ಯೋತಿ ಕತ್ತಿ, ಹೀರಾ ಚೌಗುಲೆ, ಗಿರಿಜಾ ಮುಳುಗುಂದ, ಜ್ಯೋತಿ ಮಾಳಿ, ಲಲಿತಾ ಪರ್ವತರಾವ್, ಪ್ರೇಮಾ ಪಾನಶೆಟ್ಟಿ ಹಾಗೂ ಅನೇಕರು ಉತ್ಸಾಹಭರಿತರಾಗಿ ಗೌಹಾತಿಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ.
ಈ ಕವಯತ್ರಿಯರು ಸಮ್ಮೇಳನದ ವೇಳೆ ತಮ್ಮ ಸಾಹಿತ್ಯ, ನೃತ್ಯ, ಸಂಗೀತ ಹಾಗೂ ಕಾವ್ಯ ಕಲೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ಅವರ ಪ್ರಯಾಣ ಸುಖಕರವಾಗಲಿ ಮತ್ತು ಬೆಳಗಾವಿಯ ಕವಯತ್ರಿಯರು ಅಸ್ಸಾಂ ಸಮ್ಮೇಳನದಲ್ಲಿ ಕೀರ್ತಿಯನ್ನು ಹೆಚ್ಚಿಸಲಿ ಎಂದು ಎಐಪಿಸಿ ಸದಸ್ಯರು ಹಾರೈಸಿದ್ದಾರೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143





















