ಹುಕ್ಕೇರಿ : ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧ, ಬೆದರಿಕೆಗಳು, ಮತ್ತು ಅನುಚಿತ ವಿಷಯಗಳಿಂದ ವಿಧ್ಯಾರ್ಥಿ ಗಳನ್ನು ರಕ್ಷಿಸಲು ಆನ್ಲೈನ್ ಸುರಕ್ಷತೆ, ಗೌಪ್ಯತೆ ಮತ್ತು ನೈತಿಕ ನಡುವಳಿಕೆಯ ಬಗ್ಗೆ ವಿಧ್ಯಾರ್ಥಿಗಳಲ್ಲಿ ಅದರಲ್ಲೂ ಪ್ರೌಢ ಶಾಲಾ ವಿಧ್ಯಾರ್ಥಿನಿಯರಿಗೆ ಕಲಿಸುವುದು ಅತ್ಯಗತ್ಯ ಎಂದ ಓಯಾಸಿಸ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥರಾದ ಡ್ಯಾನಿಯಲ್ ಬಾಬರಾಜ ಅಭಿಪ್ರಾಯಪಟ್ಟರು. ಓಯಾಸಿಸ್ ಸಂಸ್ಥೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಯವರು ಜಂಟಿಯಾಗಿ ಹುಕ್ಕೇರಿ ತಾಲೂಕಿನ ಯರಗಟ್ಟಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆ ಹಾಗೂ ಡಿಜಿಟಲ್ ಸುರಕ್ಷತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಿಜಿಟಲ್ ಸುರಕ್ಷತೆ ಇಲ್ಲದ ಪರಿಣಾಮ ಇವತ್ತಿನ ಯುವಜನಾಂಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಮಾನವ ಕಳ್ಳ ಸಾಗಾಣಿಕೆ, ಪ್ರೇಮ ಪ್ರಕರಣಗಳು, ಮನೆ ಬಿಟ್ಟು ಹೋಗುವ ಪ್ರಕರಣಗಳು ಸಮಾಜವನ್ನು ವಿಘಟಿಸುತ್ತಿವೆ. ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸುವಲ್ಲಿ ಪೋಷಕರು ಮತ್ತು ಸಮುದಾಯ ಮಹತ್ವದ ಪಾತ್ರ ವಹಿಸುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕುಮಾರಿ ಸಂಗೀತಾ, ಸಮುದಾಯ ಅಭಿವೃದ್ಧಿ ಅಧಿಕಾರಿ ಮಾತನಾಡಿ ಸಂವಹನ ಮತ್ತು ಶಿಕ್ಷಣದಿಂದ ಆರೋಗ್ಯ ರಕ್ಷಣೆ ಮತ್ತು ವ್ಯವಹಾರದವರೆಗೆ ಡಿಜಿಟಲ್ ಪರಿಕರಗಳು ಜೀವನದ ಪ್ರತಿಯೊಂದು ಅಂಶಕ್ಕೂ ಅವಿಭಾಜ್ಯವಾಗಿದೆ. ತಂತ್ರಜ್ಞಾನವು ವಿಕಸನಗೊಳ್ಳುತ್ತಲೆ ಇರುವುದರಿಂದ ವಿಧ್ಯಾರ್ಥಿಗಳನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡಬೇಕಿದೆ ಎಂದರು. ಸೆಂಥಿಲ್ ಕುಮಾರ್ ಮಹಿಳೆಯರು ಸಾಗಾಣಿಕೆ, ಬಾಲ್ಯ ವಿವಾಹ, ಪೊಕ್ಸೊ ಪ್ರಕರಣಗಳ ಬಗ್ಗೆ ವಿವರಿಸಿದರು. ಪ್ರಾರಂಭದಲ್ಲಿ ಪ್ರಾಚಾರ್ಯ ಕಿರಣ ಚೌಗಲಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕಿ ಗೀತಾ ಬೆಳಮರಡಿಯವರು ನಿರೂಪಣೆ ನೀಡಿದರು. ಶಿಕ್ಷಕಿಯಾದ ಶ್ರೀಮತಿ ವೀಣಾ ಮ್ಯಾಗೇರಿ ,ಘಸ್ತಿ, ರೆಶ್ಮಾ ಗೆರಲ್, ಮುಂತಾದವರು ಉಪಸ್ಥಿತರಿದ್ದರು.