ಹುಕ್ಕೇರಿ: ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆರೂರು ಎನ್‌ಎಸ್‌ಎಸ್ ಘಟಕದ ಆಶ್ರಯದಲ್ಲಿ ಜೂನ್ 12 ರಂದು “ಬಾಲ ಕಾರ್ಮಿಕ ವಿರೋಧಿ ದಿನಾಚರಣೆ” ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಶಂಕರ್ ತೇಲಿ ಅವರು ವಿದ್ಯಾರ್ಥಿಗಳಿಗೆ ಶಿಸ್ತಿನ ಶಪಥ ಬೋಧಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ನೀಡಿದ ಕಾಲೇಜಿನ ನಿಕಟಪೂರ್ವ ಪ್ರಾಚಾರ್ಯ ಎಂ.ಆರ್. ಬಾಗಾಯಿ ಅವರು, “ಇಂದಿನ ಯುಗ ಜ್ಞಾನಯುಗವಾಗಿದ್ದು, ಶಿಕ್ಷಣಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಆದರೆ ಕೆಲವು ಮಕ್ಕಳಿಗೆ ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ಇಂದಿಗೂ ಬಾಲ್ಯದಲ್ಲಿ ಕಾರ್ಮಿಕರಾಗಬೇಕಾಗುತ್ತಿದೆ ಎಂಬುದು ಅತ್ಯಂತ ದುಃಖದ ಸಂಗತಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಮುಂದಾಗಿ, “ಬಾಲಕಾರ್ಮಿಕತೆಯನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿದ್ದು, ಉಚಿತ ಶಿಕ್ಷಣ, ಪಠ್ಯಪುಸ್ತಕಗಳು, ಮಧ್ಯಾಹ್ನದ ಬಿಸಿ ಊಟ, ಬೆಳಗಿನ ಉಪಹಾರ, ಹಾಲು, ಉಚಿತ ಸಮವಸ್ತ್ರ, ಶಿಷ್ಯವೇತನ, ನೈತಿಕ ಶಿಕ್ಷಣ ಮುಂತಾದ ಸೌಲಭ್ಯಗಳನ್ನು ಕಲ್ಪಿಸುತ್ತಿವೆ” ಎಂದು ವಿವರಿಸಿದರು.
ಅವರು ವಿದ್ಯಾರ್ಥಿಗಳಿಗೆ “ನಮ್ಮ ಸುತ್ತಮುತ್ತ, ಗ್ರಾಮದಲ್ಲಿ ಬಾಲಕರು ಹೊಟೇಲ್, ಅಂಗಡಿ, ಕಾರ್ಖಾನೆ, ಭಟ್ಟಿಗಳು, ಕೃಷಿ ಕ್ಷೇತ್ರಗಳಲ್ಲಿ ದುಡಿಯುತ್ತಿರುವುದನ್ನು ಕಂಡರೆ, ಅವರನ್ನು ಶಾಲೆಗೆ ತರಲು ನಾವು ಪ್ರಯತ್ನಿಸಬೇಕು. ಇಂತಹ ಸಮಾಜಮುಖಿ ಬದಲಾವಣೆಯಿಂದ ಮಾತ್ರ ಈ ಪಿಡುಗನ್ನು ನಿವಾರಣ ಮಾಡಬಹುದು.” ಎಂದು ಕಿವಿಮಾತು ಹೇಳಿದರು.
ಈ ವೇಳೆ, ಪ್ರಾಚಾರ್ಯ ಶ್ರೀಶೈಲ ಕೋಲಾರ್, ಉಪನ್ಯಾಸಕರು ಅನಿಲ್ ಬಾನೆ, ಸಂಜೀವ್ ಮಾನೆ, ಅಮೂಲ್ ಧಾನೋಳೆ, ಗಣಪತಿ ಪಾಟೀಲ್, ಕವಿತಾ ಮಾಲಬಣ್ಣವರ್, ಪ್ರತಿಭಾ ವಟ್ನಾಳ್, ಸ್ವಾತಿ ಮಾಳಿ ಹಾಗೂ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.