ಅಂಕಲಿ: ಚಿಕ್ಕೋಡಿ ತಾಲೂಕಿನ ಕೆರೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಅಡಿಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಅಂಕಲಿ ಪೊಲೀಸ್ ಠಾಣೆಯ ಪಿಎಸ್ಐ ನಂದೀಶ್ ಅವರು ಮುಖ್ಯ ಭಾಷಣ ಮಾಡುತ್ತಾ, “ಇತ್ತೀಚಿನ ದಿನಗಳಲ್ಲಿ ಸಮಾಜ ವಿರೋಧಿ ಚಟುವಟಿಕೆಗಳು ಹೆಚ್ಚಳವಾಗುತ್ತಿದ್ದು, ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಬಾಹ್ಯ ಆಕರ್ಷಣೆಗೆ ಒಳಗಾಗಿ ಮಾದಕ ವಸ್ತುಗಳ ಬಳಕೆ ಮೂಲಕ ತಮ್ಮ ಭವಿಷ್ಯವನ್ನು ನಾಶಮಾಡಿಕೊಳ್ಳುತ್ತಿದ್ದಾರೆ,” ಎಂದು ಆತಂಕ ವ್ಯಕ್ತಪಡಿಸಿದರು. ಗುಟ್ಕಾ, ಸಿಗರೇಟ್, ಗಾಂಜಾ, ಡ್ರಗ್ಸ್, ಹೆರಾಯಿನ್ ಮುಂತಾದ ಅಪಾಯಕಾರಿ ಪದಾರ್ಥಗಳ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.
ಅವರು ಮುಂದುವರೆದು, “ಮಕ್ಕಳು ಮೊಬೈಲ್ ಮೂಲಕ ಅಶ್ಲೀಲ ವಿಷಯಗಳಿಗೆ ಚಿಕ್ಕ ವಯಸ್ಸಿನಲ್ಲಿ ತುತ್ತಾಗಿ ಮನೆಗಳಿಂದ ಓಡಿ ಹೋಗುವ ಪ್ರಕರಣಗಳು ಹೆಚ್ಚುತ್ತಿವೆ. ಇದು ಸಮಾಜಕ್ಕೆ ತೀವ್ರವಾದ ಕಳವಳದ ವಿಷಯವಾಗಿದೆ” ಎಂದು ತಿಳಿಸಿದರು.
ಪ್ರಾಚಾರ್ಯ ಶ್ರೀಶೈಲ್ ಕೋಲಾರ್ ಮಾತನಾಡುತ್ತಾ, “ಸಾಸಿವೆಯಷ್ಟು ಸುಖಕ್ಕಾಗಿ ಸಾಗರದಷ್ಟು ದುಃಖವನ್ನು ಇಂದಿನ ಮಕ್ಕಳು ಅನುಭವಿಸುತ್ತಿದ್ದಾರೆ. ತಾತ್ಕಾಲಿಕ ಆನಂದಕ್ಕಾಗಿ ಅವರು ಅಪಾಯಕಾರಿಯಾದ ದಾರಿಗಳತ್ತ ವಾಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ದೇಶದ ಪ್ರಗತಿಗೆ ಹೊಣೆಗಾರ ಪ್ರಜೆಗಳಾಗಿ ರೂಪುಗೊಳ್ಳುವುದು ಅವಶ್ಯಕ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಕಲಿ ಠಾಣೆಯ ಸಿಬ್ಬಂದಿಗಳಾದ ಸಪ್ತಸಾಗರ ಸರ್, ದಲ್ವಾರ ಸರ್, ಹಾಗೂ ಕಾಲೇಜಿನ ಎನ್‌ಎಸ್ಎಸ್ ಯೋಜನಾಧಿಕಾರಿಗಳಾದ ಶಂಕರ್ ತೇಲಿ, ಅಮೂಲ್ ಧಾನೋಳಿ, ಪ್ರತಿಭಾ ವಟ್ನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕವಿತಾ ಮಲಬಣ್ಣವರ್ ಕಾರ್ಯಕ್ರಮ ನಿರೂಪಣೆ ಮಾಡಿದ್ದು, ಶಂಕರ್ ತೇಲಿ ಅವರು ವಿದ್ಯಾರ್ಥಿಗಳಿಗೆ ಮಾದಕವಸ್ತು ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು.
ಈ ದಿನಾಚರಣೆ ವಿದ್ಯಾರ್ಥಿಗಳಲ್ಲಿ ಮಾದಕವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಆರೋಗ್ಯಕರ ಜೀವನ ಶೈಲಿಯ ಪಥದಲ್ಲಿ ಸಾಗುವ ಪ್ರೇರಣೆಯ ಕಾರ್ಯಕ್ರಮವಾಯಿತು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143