ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರ ನೇಮಕಾತಿ, ವೇತನ ತಾರತಮ್ಯ, ಕಾರ್ಯಭಾರ ಹೊಂದಾಣಿಕೆ, ಆನ್ಲೈನ್, ಒಳ ಮೀಸಲಾತಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇವುಗಳಿಗೆ ಸರ್ಕಾರದಿಂದ ಸಕಾಲದಲ್ಲಿ ಪರಿಹಾರ ದೊರೆಯಲಾರದೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಚ್ಚುವ ಸ್ಥಿತಿಗೆ ಬಂದು ನಿಂತಿವೆ. ಈ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಿ ಪರಿಹಾರ ನೀಡಬೇಕೆಂದು ಖಾಸಗಿ ಅನುದಾನಿತ, ಅನುದಾನ ರಹಿತ ಆಡಳಿತ ಮಂಡಳಿಗಳ ಮತ್ತು ಸಿಬ್ಬಂದಿ ವರ್ಗದವರ ಹೋರಾಟ ಸಮಿತಿಯ ಅಧ್ಯಕ್ಷರಾದ ಎನ್. ಬಿ. ಬನ್ನೂರ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಮನವಿ ಸಲ್ಲಿಸಿದರು. ರಾಜ್ಯದ ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಶೇ. 90ರಷ್ಟು ಹುದ್ದೆಗಳು ನಿವೃತ್ತಿಯಿಂದ ತೆರವಾಗಿದ್ದು ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅಡಚಣೆಯುಂಟಾಗುತ್ತಿದೆ. ಅದಲ್ಲದೆ ಸರ್ಕಾರ ಬೋಧಕೇತರ ಸಿಬ್ಬಂದಿ ನೇಮಕ ರದ್ದು ಮಾಡಿದ್ದು ಇದರಿಂದ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ವಹಣೆಗೆ ತೊಂದರೆಯುಂಟಾಗುತ್ತಿದೆ ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಳು ಹಾಗೂ ಕಮತಗಿಯ ಹುಚ್ಚೇಶ್ವರ ಸ್ವಾಮಿಗಳವರ ಮಾರ್ಗದರ್ಶನದಂತೆ ಸಮಿತಿಯ ಸದಸ್ಯರು ಅಧ್ಯಕ್ಷರ ನೇತೃತ್ವದಲ್ಲಿ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಬಿ.ಬಿ. ಖೋಥ, ಬಲರಾಮ ನಾಯಕ,ಪಿ.ಡಿ. ಶಿವನಾಯ್ಕರ್, ಎಲ್.ಬಿ. ಪಾಟೀಲ, ಶ್ಯಾಮ ಪ್ರಸಾದ ಸೇರಿದಂತೆ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.