Live Stream

[ytplayer id=’22727′]

| Latest Version 8.0.1 |

National NewsState News

ಎಪ್ರಿಲ್ 3 ಜನ್ಮದಿನ: ಕನ್ನಡದ ಹಿರಿಮೆ ಎತ್ತಿ ಹಿಡಿದ ಸಾಹಿತಿ ಬೆನಗಲ್ಲ ರಾಮರಾಯರು

ಎಪ್ರಿಲ್ 3 ಜನ್ಮದಿನ: ಕನ್ನಡದ ಹಿರಿಮೆ ಎತ್ತಿ ಹಿಡಿದ ಸಾಹಿತಿ ಬೆನಗಲ್ಲ ರಾಮರಾಯರು

********************

ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ
ಕನ್ನಡವೆ ಎನ್ನುಸಿರು ಪೆತ್ತೆನ್ನ ತಾಯಿ
ಕನ್ನಡವೆ ಧನಧಾನ್ಯ ಕನ್ನಡವೆ ಮನೆಮಾನ್ಯ
ಕನ್ನಡವೆ ಎನಗಾಯ್ತು ಕಣ್ಣು ಕಿವಿಬಾಯಿ

ಕನ್ನಡದ ಸವಿಮಾತು ಮನ್ನಣೆಯ ಪಳಮಾತು
ಕನ್ನಡ ಸರಸ್ವತಿಯು ನವ ಕಲ್ಪಲತೆಯು
ಕನ್ನಡದ ವರಚರಿತೆ ವಿಮಲ ಗಂಗಾ ಸರಿತೆ
ಕನ್ನಡವು ಸಿರಿಪೆಂಪು ಎನಗೆ ನರುಗಂಪು
ಕನ್ನಡದ ಸನ್ಮಾನವೆನಗದುವೆ ವರಮಾನ
ಕನ್ನಡಿಗರ ಸ್ವತಂತ್ರವದೆ ಪರಮ ಮಂತ್ರ
ಕನ್ನಡದ ಕೀರ್ತಿ ಎನ್ನ ಚಿತ್ತದ ಸ್ಫೂರ್ತಿ
ಕನ್ನಡದ ಒಗ್ಗೂಟವೆನಗದೆ ಕಿರೀಟ

ಕನ್ನಡದ ಹೊಲಮಣ್ಣು ಎನಗೆ ನವನಿಧಿ ಹೊನ್ನು
ಕನ್ನಡದ ತಿಳಿಜಲವು ಸುಧೆಯ ಪಲ್ವಲವು
ಕನ್ನಡದ ಹೂಗಿಡವು ಎನ್ನೊಡಲಿಗದೆ ತೊಡವು ಕನ್ನಡದ ಪಶುಪಕ್ಷಿ ಚೆಲುವಿಗದೆ ಸಾಕ್ಷಿ

ಕನ್ನಡಿಗರತಿಶಯವು ಭುವನೇಶ್ವರಿಯ ದಯವು
ಕನ್ನಡಿಗರ ಜಯವು ಕೃಷ್ಣನಾಶ್ರಯವು
ಕನ್ನಡದ ಜನಕುಲವು ಎನ್ನ ತೋಳಿಗೆ ಬಲವು
ಕನ್ನಡಾಂಬೆಯ ಮುಕ್ತಿ ರಾಮನುತೆ – ಶಕ್ತಿ!
ಕವಿ- ಬೆನಗಲ್ ರಾಮರಾಯರು

ಕರ್ನಾಟಕದಲ್ಲಿ ಇಬ್ಬರು ಬೆನಗಲ್ ರಾಮರಾಯರಿದ್ದಾರೆ. ಒಬ್ಬರು ಸಾಹಿತಿ ರಾಮರಾಯರು, ಇನ್ನೊಬ್ಬರು ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಮೊದಲ ಗವರ್ನರ್ ಆದ ಆರ್ಥಿಕ ತಜ್ಞರು.
ಈ ಮೇಲಿನ ಕವನ ಬರೆದ ಸಾಹಿತಿ ರಾಮರಾಯರು ಮಂಗಳೂರು ಹತ್ತಿರದ ಮುಲ್ಕಿಯಲ್ಲಿ ಜನಿಸಿದವರು.

ಸಾಹಿತಿ ರಾಮರಾಯರು ೧೮೭೬ ಎಪ್ರಿಲ್ ೩ ರಂದು ಜನಿಸಿದರು. ತಂದೆ ಮಂಜುನಾಥಯ್ಯ ವಕೀಲರು. ಮದ್ರಾಸ ರೆಸಿಡೆನ್ಸಿಯಲ್ಲಿ ಬಿ. ಎ. ಪಾಸಾಗಿ ಅಲ್ಲೇ ಕ್ರಿಶ್ಚಿಯನ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ಮುಂದೆ ಕನ್ನಡ ತೆಲುಗು ಮುಖ್ಯ ವಿಷಯವಾಗಿ ಎಂಎ. ಪಾಸಾಗಿ , ಮೈಸೂರಲ್ಲಿ ಕನ್ನಡ ಅಧ್ಯಾಪಕರಾಗಿ, ಮುಂಬಯಿ ಸರಕಾರದ ಭಾಷಾಂತರ ಇಲಾಖೆಯಲ್ಲೂ ಸೇವೆಸಲ್ಲಿಸಿದ ರಾಮರಾಯರು ಸಂಸ್ಕೃತ, ಮರಾಠಿ, ಬಂಗಾಳಿ ಸಹಿತ ಹಲವು ಭಾಷೆಗಳನ್ನು ಬಲ್ಲವರಾಗಿದ್ದರು.

ಸಾಹಿತ್ಯ ರಚನೆಗೆ ತೊಡಗಿದ ಅವರು ಬೇರೆ ಬೇರೆ ಭಾಷೆಗಳಿಂದ ಕೃತಿಗಳನ್ನು ಅನುವಾದಿಸಿದರಲ್ಲದೆ ಅನೇಕ ಸ್ವತಂತ್ರ ಕೃತಿಗಳನ್ನೂ ನೀಡಿದರು. ಇರಾವತಿ, ಕಲಹಪ್ರಿಯ, ರಮಾಮಾಧವ, ಪೂರ್ವದೇಶದ ಯಾತ್ರೆಗಳು, ದೂತಾಂಗ, ಕೃಷ್ಣಕುಮಾರಿ , ಚಿಕ್ಕ ಕಥೆಗಳು ಮೊದಲಾದವುಗಳಲ್ಲದೆ ಪಾನ್ಯಂ ಸುಂದರ ಶಾಸ್ತ್ರಿ ಅವರೊಡನೆ ಬರೆದ ಪುರಾಣನಾಮ ಚೂಡಾಮಣಿ ಒಂದು ಅಪೂರ್ವ ಆಕರ ಗ್ರಂಥವಾಗಿದೆ.
ರಾಮರಾಯರು ಪತ್ರಕರ್ತರಾಗಿಯೂ ಕೆಲಸ ಮಾಡಿದ್ದಾರೆ.

(ಮಂಗಳೂರಿನ ಸುಹಾಸಿನಿ, ಧಾರವಾಡದ ವಾಗ್ಭೂಷಣ ಮೊದಲಾದವು) ೧೯೨೫ ರಲ್ಲಿ ಬೆಳಗಾವಿಯಲ್ಲಿ ಜರುಗಿದ ೧೧ ನೆಯ ರಾಜ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ಅವರದಾಗಿತ್ತು. ಏಕೀಕರಣ ಹೋರಾಟದಲ್ಲೂ ಅವರು ಪಾಲ್ಗೊಂಡಿದ್ದರು.
೧೯೪೩ ಮೇ ೮ ರಂದು ರಾಮರಾಯರು ನಿಧನರಾದರು.

✍🏻ಎಲ್. ಎಸ್. ಶಾಸ್ತ್ರಿ

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";