ಇಂದು ಹಿರಿಯ ನಟ ಎಂದು ಕರೆಸಿಕೊಳ್ಳುವ ಅಶೋಕ್ ಅವರು 70-80ರ ದಶಕದಲ್ಲಿ ಕನ್ನಡದ ಹ್ಯಾಂಡ್ಸಮ್ ಹೀರೋ ಆಗಿದ್ದರು. ಡಾ ರಾಜ್ಕುಮಾರ್ ಹಾಗೂ ಜಯಪ್ರದಾ ಜೋಡಿಯ ‘ಸನಾದಿ ಅಪ್ಪಣ್ಣ’ ಚಿತ್ರದಲ್ಲಿ ನೆಗೆಟೀವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರು.
ಸನಾದಿ ಅಪ್ಪಣ್ಣ ಕಾದಂಬರಿ ಓದಿದಾಗಲೇ ನಟ ಅಶೋಕ್ ಅವರಿಗೆ ಈ ಪಾತ್ರ ಮಾಡೋದು ಬೇಡ ಅನಿಸಿತ್ತಂತೆ. ಅದನ್ನು ಡಾ ರಾಜ್ ಅವರು ಒಬ್ಬರೇ ಇದ್ದಾಗ ಅಶೋಕ್ ಹೇಳಿದ್ದರಂತೆ ಕೂಡ.
ಅದಕ್ಕೆ ಅಣ್ಣಾವ್ರು ‘ಬೇಡ ಅಂದ್ರೆ ಬೇಡ ಬಿಡಿ..’ ಅಂದಿದ್ರಂತೆ. ಆದರೆ, ವರದರಾಜು ಅವರು ‘ಅಶೋಕ ಆ ಪಾತ್ರ ಮಾಡಲ್ಲ ಅಂದ್ರೆ ಈ ಸಿನಿಮಾನೇ ನಿಲ್ಲಿಸಿಬಿಡೋಣ’ ಅಂದಿದ್ರಂತೆ. ಆಮೇಲೆ ವೀರಾಸ್ವಾಮಿ, ದೊರೈ ಭಗವಾನ್ ಹಾಗೂ ಸಿದ್ಧಲಿಂಗಯ್ಯನವರು ಎಲ್ಲಾ ಸೇರಿ ‘ನಮ್ಮಾತೆಲ್ಲ ಕೇಳದೇ ಅದು ಹೆಂಗೆ ನೀನು ಈ ತರ ಎಲ್ಲ ಮಾಡ್ಬಿಡ್ತೀಯ ಅಂತ ಹೇಳಿ, ಮಾಡ್ಲೇಬೇಕು ಅಂದಾಗ ‘ನಾನು, ಹೂ.. ಅಂತ, ನಂಗೆ ಆವಾಗ 24-25 ವರ್ಷ. ಇಂಡಸ್ಟ್ರಿ ಎದುರಾಕ್ಕೊಂಡು ಹೇಗಪ್ಪ ಬದುಕೋದು ಅಂತ, ಆಯ್ತು ಮಾಡ್ತೀನಿ ಅಂದೆ’ ಎಂದಿದ್ದಾರೆ.
ಚಿತ್ರದಲ್ಲಿ ನನ್ನ ನಟನೆ ಅದ್ಭುತವಾಗಿ ಬಂದಿದೆ ಅಂತ ಎಲ್ಲರೂ ಹೊಗಳಿದ್ದರು. ಆದರೆ, ನನ್ನ ಮುಂದಿನ ಕೆರಿಯರ್ಗೆ ಏಟು ಬಿತ್ತಲ್ಲ! ನಾನು ಅಂದು ಜನರ ದೃಷ್ಟಿಯಲ್ಲಿ ‘ಖಳನಾಯಕ’ ಆಗ್ಬಿಟ್ಟೆ. ರಾಜ್ಕುಮಾರ್ಗೆ ಬಯ್ದುಬಿಟ್ಟೆ ಅಂತ ಸಿನಿಮಾ ಅಭಿಮಾನಿಗಳು ನನ್ನ ಮೇಲೆ ಕೋಪಗೊಂಡ್ರು. ನನ್ನ ನಟನೆ, ನನ್ನ ಪಾತ್ರ ಗೆದ್ದಿತ್ತು, ಆದ್ರೆ ನಾನು ಸೋತಿದ್ದೆ. ಇಲ್ಲಿ ವ್ಯಕ್ತಿ ಪೂಜೆ ಅಡ್ಡ ಬಂತು. ಇಲ್ಲಿ ಪಾತ್ರ, ನಟನೆ ಎಂಬುದನ್ನೆಲ್ಲಾ ಜನರು ಮರೆತುಬಿಟ್ರು. ಅಣ್ಣಾವ್ರ ವಿರುದ್ಧ ಇವ್ನು ಮಾತಾಡಿದಾನಲ್ಲ (ಸಿನಿಮಾ ಡೈಲಾಗ್) ಅಂತ ಜನರು ನನ್ನನ್ನು ದ್ವೇಷಿಸತೊಡಗಿದರು. ನಾನು ಥಿಯೇಟರ್ಗೆ ಸಿನಿಮಾ ನೋಡಲು ತಲೆಗೆ ಹೆಲ್ಮೆಟ್ ಹಾಕ್ಕೊಂಡು ಹೋಗೋ ಥರ ಆಯ್ತು. ಆಗ ಅಣ್ಣಾವ್ರ ಜನಪ್ರಿಯತೆ ಕೂಡ ಹಾಗೇ ಇತ್ತು. ಆದ್ರೆ ಆಗತಾನೆ ಚಿತ್ರರಂಗಕ್ಕೆ ಬಂದಿದ್ದ ನಾವು ಕಲಾವಿದರು ಅಂತ ಪ್ರೂವ್ ಮಾಡ್ಕೋಬೇಕಿತ್ತು. ಆದ್ರೆ ಇಲ್ಲಿ ಕಲಾವಿದರು ಅಂತ ಪ್ರೂವ್ ಮಾಡ್ಕೊಳ್ಳೋದಾ? ಸ್ಟಾರ್ ಅಂತ ಪ್ರೂವ್ ಮಾಡ್ಕೊಳ್ಳೋದಾ? ಅಂತಹ ಡೈಲಾಮಾ ಇದ್ದಾಗ ಅಲ್ಲಿ ಸ್ಟಾರೇ ನಿಲ್ತಾನೆ. ಅದಾದ ಮೇಲೆ ನಂಗೆ ಸಿನಿಮಾದಲ್ಲಿ ಅವಕಾಶಗಳೇ ಕಮ್ಮಿ ಆಗಿಹೋದವು’ ಎಂದಿದ್ದಾರೆ ನಟ ಅಶೋಕ್.
ಹೌದು, ನಟ ಅಶೋಕ್ ಅವರು ಬಹಳಷ್ಟು ಸ್ಪುರದ್ರೂಪಿ ನಟರಾಗಿದ್ದರು. ಸಾಕಷ್ಟು ಚಿತ್ರಗಳಲ್ಲಿ ಹೀರೋ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ, ಸನಾದಿ ಅಪ್ಪಣ್ಣ ಚಿತ್ರದ ಬಳಿಕ ಅವರನ್ನ ನಿಜ ಜೀವನದಲ್ಲಿ ‘ವಿಲನ್‘ ಎಂಬಂತೆ ನೋಡಲಾಯ್ತು. ಇದನ್ನು ಸ್ವತಃ ಅಶೋಕ್ ಅವರೇ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಯಾಕೆ ಹಾಗಾಗುತ್ತೆ ಕೆಲವು ಕಲಾವಿದರ ಬದುಕಿನಲ್ಲಿ? ಅಂತಹ ದುರಂತ ನಡೆಯಲು ಕಾರಣವೇನು? ಇದಕ್ಕೆ ಉತ್ತರ ಪ್ರೇಕ್ಷಕರಲ್ಲಿ ಇರುವ ಮುಗ್ಧತೆ ಬೆರೆತ ದಡ್ಡತನ ಎನ್ನಬೇಕು. ಏಕೆಂದರೆ, ಅಂದು ಸಿನಿಮಾ ಪಾತ್ರವನ್ನ ಕೇವಲ ಪಾತ್ರ ಎನ್ನುವ ದೃಷ್ಟಿಯಿಂದ ನೋಡುವ ಬದಲು ಅದೇ ನಿಜ ಜೀವನ ಎಂಬಂತೆ ಭ್ರಮಿಸಲಾಗುತ್ತಿತ್ತು. ಅದೇ ಕಾರಣಕ್ಕೆ ಒಮ್ಮೆ ವಿಲನ್ ರೋಲ್ನಲ್ಲಿ ಕಾಣಿಸಕೊಂಡರೆ ಬಳಿಕ ಆ ನಟನನ್ನು ಜನರು ಖಳನಾಯಕ ಎಂಬಂತೆ ನೋಡುತ್ತಿದ್ದರು. ಅದಕ್ಕೆ ಸಾಕ್ಷಿ ನಟ ವಿಷ್ಣುವರ್ಧನ್.
ಹೌದು, ನಟ ವಿಷ್ಣುವರ್ಧನ್ ಅವರು ಡಾ ರಾಜ್ಕುಮಾರ್ ಎದುರು ‘ಗಂಧದ ಗುಡಿ’ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದರು. ಅದಕ್ಕು ಮೊದಲು ಅವರು ನಾಗರಹಾವು ಚಿತ್ರದಲ್ಲಿ ಹೀರೋ ಆಗಿದ್ದವರು. ಆದರೆ, ಗಂಧದ ಗುಡಿ ಚಿತ್ರದ ಆ ವಿಲನ್ ಪಾತ್ರ ಅವರ ಜೀವನದಲ್ಲಿ ನಿಜವಾದ ‘ವಿಲನ್’ ಆಗಿಬಿಟ್ಟಿತು. ಅಲ್ಲಿಂದ ಮುಂದೆ ನಟ ವಿಷ್ಣುವರ್ಧನ್ ನಾಯಕರಾಗಿಯೇ ಅಭಿನಯವನ್ನು ಮುಂದುವರಿಸಿದ್ದರೂ ಕೂಡ ಡಾ ರಾಜ್ ಅವರಿಗೆ ವಿಷ್ಣುವರ್ಧನ್ ವಿಲನ್ ಎಂಬಂತೆ ಸಿನಿಮಾ ಅಭಿಮಾನಿಗಳು ಭಾವಿಸಿ ಅದನ್ನೇ ತಮ್ಮ ಕೃತಿಯಲ್ಲೂ ತೋರಿಸುತ್ತಿದ್ದರು. ನಟ ಅಶೋಕ್ ಪಾಲಿಗೆ ಕೂಡ ಅದೇ ಆಗಿದ್ದು ದುರಂತ!