ದೆಹಲಿ: ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆ ಬಳಿಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಭಾರೀ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಸಿಸಿಟಿವಿ ದೃಶ್ಯಗಳು ಹೊರಬಿದ್ದಿವೆ. ಈ ಘಟನೆಯಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆ ನವೆಂಬರ್ 10 ಸಂಜೆ 6:22 ಕ್ಕೆ ಸಂಭವಿಸಿದ್ದು, ಹುಂಡೈ ಐ20 ಕಾರನ್ನು ಒಬ್ಬ ಯುವಕ ಚಾಲನೆ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಇದೇ ಕಾರು ನಂತರ ಸುಭಾಷ್ ಮಾರ್ಗ್ ಟ್ರಾಫಿಕ್ ಸಿಗ್ನಲ್ ಬಳಿ ಅಚಾನಕ್ ಸ್ಫೋಟಗೊಂಡಿತ್ತು.
ಮೂಲಗಳ ಪ್ರಕಾರ, ಸ್ಪೋಟಕ್ಕೂ ಮೊದಲು ಚಾಲಕನು ತನ್ನ ಸಂಬಂಧಿಕರನ್ನು ಹಳೆಯ ದೆಹಲಿ ರೈಲು ನಿಲ್ದಾಣಕ್ಕೆ ಬಿಟ್ಟ ನಂತರ, ಕೆಂಪುಕೋಟೆ ಕಡೆಗೆ ಸಾಗುತ್ತಿದ್ದನೆಂದು ತನಿಖಾಧಿಕಾರಿಗಳು ಹೇಳುತ್ತಿದ್ದಾರೆ. ಬಿಡುಗಡೆಯಾದ ದೃಶ್ಯದಲ್ಲಿ ಚಾಲಕನ ಮುಖ ಸ್ಪಷ್ಟವಾಗಿ ಪತ್ತೆಯಾಗಿದೆ, ಇದರಿಂದ ತನಿಖೆಗೆ ಮತ್ತಷ್ಟು ಸುಳಿವು ದೊರಕುವ ನಿರೀಕ್ಷೆ ವ್ಯಕ್ತವಾಗಿದೆ.
ಪೊಲೀಸರು ಮತ್ತು ರಾಷ್ಟ್ರೀಯ ಸ್ಫೋಟ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಸ್ಫೋಟದ ಕಾರಣ, ಸ್ಫೋಟಕದ ಪ್ರಕಾರ ಮತ್ತಿತರ ವಿವರಗಳ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ಸ್ಫೋಟ ಉದ್ದೇಶಿತವೇ? ಅಥವಾ ಅಪಘಾತವೇ? ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಸ್ಪಷ್ಟನೆ ಇನ್ನೂ ಬರಬೇಕಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143





















