ಬೆಳಗಾವಿ: ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಪಿಯ ಜನಾಕ್ರೋಶದ ಯಾತ್ರೆಯ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನ ಎಲ್ಲ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಗ್ಯಾರಂಟಿ ಗಳನ್ನ ನೀಡಿದ್ದೇವೆ, ರಾಜ್ಯದ ಜನರು ಸಂತೋಷದಿಂದ ಇದ್ದಾರೆ ಎಂದು ಮುಖ್ಯಮಂತ್ರಿಗಳು ಭ್ರಮೆಯಲ್ಲಿದ್ದರು. ಸರಕಾರ ಬಂದಾಗಿನಿಂದ ಸಿಎಂ, ಡಿಸಿಎಂ ಹಾಗೂ ಸಚಿವರು ಬೆಂಗಳೂರಿಗೆ ಮಾತ್ರ ಸೀಮಿತರಾಗಿದ್ದಾರೆ. ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಎಳೆ ಎಳೆಯಾಗಿ ಜನರ ಮುಂದೆ ಬಿಚ್ಚಿ ಇಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ರಾಜ್ಯ ಸರಕಾರದ ಬೆಲೆ ಏರಿಕೆಯ ಪರಿಣಾಮವಾಗಿ ನಾಡಿನ ಜನರು ತತ್ತರಿಸಿ ಆಕ್ರೋಶ ಭರಿತರಾಗಿರುವುದು ನಮ್ಮ ಹೋರಾಟದ ಪರಿಣಾಮದಿಂದ ಮುಖ್ಯಮಂತ್ರಿಗೆ ತಟ್ಟಿದೆ. ಏನಾದರೂ ಮಾಡಿ ನಮ್ಮ ಜನಾಕ್ರೋಶ ಯಾತ್ರೆ ದಿಕ್ಕು ಬದಲಿಸಲು ಕೇಂದ್ರ ಸರಕಾರದ ವಿರುದ್ಧ ಹೋರಾಟ ಹಾಕಿಕೊಂಡಿದ್ದಾರೆ ಅವರಿಗೆ ಒಳ್ಳೆಯದಾಗಲಿ ಎಂದರು.
ಮುಖ್ಯಮಂತ್ರಿಗಳು ಹಾಗೂ ಸರಕಾರದ ಸಚಿವರುಗಳು ಹಳ್ಳಿಗಳಿಗೆ ಬಂದು ಜನರ ಸಂಕಷ್ಟಗಳನ್ನು ಅರಿತುಕೊಳ್ಳಬೇಕು ಎನ್ನುವ ಆಗ್ರಹ ಮಾಡುತ್ತೇನೆ ಎಂದರು. ಗ್ಯಾರಂಟಿ ಯೋಜನೆ ನೀಡಿರುವ ಸರಕಾರ ನಮ್ಮ ರಾಜ್ಯ ನೆಮ್ಮದಿಯಿಂದ ಇದೆ ಎಂದಿದ್ದಾರೆ. ಆದರೆ ರಾಜ್ಯದ ಶಾಸಕರಿಗೆ ಅಭಿವೃದ್ಧಿಗೆ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಕಾಂಗ್ರೆಸ್ ಸರಕಾರ ಐದುವರೆ ರೂ. ಡೀಸೆಲ್, ಮೂರು ಪೆಟ್ರೋಲ್ ಬೆಲೆ ಏರಿಕೆ ಮಾಡಿದೆ. ಇದು ಜನಪರ ಮುಖ್ಯಮಂತ್ರಿ ಮಾಡುವ ಕೆಲಸನಾ? ಎಂದು ವಾಗ್ದಾಳಿ ನಡೆಸಿದರು.
ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಲಾರಿ ಮುಷ್ಕರ ನಡೆಯುತ್ತಿದೆ. ಇದು ರಾಜ್ಯ ಸರಕಾರದ ದುರಾಡಳಿತ. ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಸೋನಿಯಾ ಗಾಂಧಿ ಆರೋಪಿ ನಂಬರ್ ಒನ್, ರಾಹುಲ್ ಗಾಂಧಿ ಆರೋಪಿ ನಂಬರ್ ಟೂ ತಪ್ಪು ಮಾಡಿದವರು ಅನುಭವಿಸಬೇಕಾಗುತ್ತದೆ ಎಂದರು.
ರಾಜ್ಯ ಸರಕಾರ ಬೆಲೆ ಏರಿಕೆ ಮಾಡಿರುವ ವಿರುದ್ಧ ಬಿಜೆಪಿಯಿಂದ ಮೂರು ಹಂತದಲ್ಲಿ ಜನಾಕ್ರೋಶ ಯಾತ್ರೆ ಆಯೋಜನೆ ಹಮ್ಮಿಕೊಂಡಿದ್ದೇವೆ. ಮೊದಲ ಹಂತದಲ್ಲಿ ಮೈಸೂರು, ಮಂಡ್ಯ, ಹಾಸನ, ಮಡಿಕೇರಿ,ಮಂಗಳೂರು, ಉಡುಪಿ, ಉತ್ತರ ಕನ್ನಡ, ನಿಪ್ಪಾಣಿಯಲ್ಲಿ ಮುಗಿದಿದೆ. ಈಗ ಎರಡನೇ ಹಂತದ ಜನಾಕ್ರೋಶ ಯಾತ್ರೆ ಬೆಳಗಾವಿಯಲ್ಲಿ ಪ್ರಾರಂಭಾಗಿದೆ ಎಂದರು.
ಮಾಜಿ ಶಾಸಕ ಸಂಜಯ ಪಾಟೀಲ್, ಅಣ್ಣಾಸಾಹೇಬ ದೇಸಾಯಿ ಇದ್ದರು.