ಫೆಬ್ರವರಿ 19ರಂದು ಪಾಕಿಸ್ತಾನದಲ್ಲಿ ಆರಂಭವಾದ ಕಿರು ವಿಶ್ವಕಪ್ ಎಂದೇ ಖ್ಯಾತಿಯಾಗಿರುವ ಚಾಂಪಿಯನ್ಸ್ ಟ್ರೋಫಿ-2025 ಮಾರ್ಚ್ 9ರಂದು ದುಬೈನಲ್ಲಿ ಮುಕ್ತಾಯಗೊಂಡಿತು. ಪ್ರಶಸ್ತಿ ಹೋರಾಟದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಿದ ಟೀಮ್ ಇಂಡಿಯಾ, ಭರ್ಜರಿ ಗೆಲುವಿನೊಂದಿಗೆ ಟ್ರೋಫಿಯನ್ನು ಎತ್ತಿಹಿಡಿಯಿತು. ಗ್ರೂಪ್ ಹಂತದಿಂದ ಹಿಡಿದು ಸೆಮಿಫೈನಲ್ ಮತ್ತು ಫೈನಲ್ವರೆಗೆ ಒಂದೇ ಒಂದು ಪಂದ್ಯವನ್ನು ಸಹ ಸೋಲದೇಯೇ ಅಜೇಯವಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಟೀಮ್ ಇಂಡಿಯಾ ಗೆದ್ದುಕೊಂಡಿತು.
ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇತ್ತೀಚೆಗಷ್ಟೇ ಚಾಂಪಿಯನ್ಸ್ ಟ್ರೋಫಿ-2025 ಟೂರ್ನಮೆಂಟ್ ತಂಡವನ್ನು ಪ್ರಕಟಿಸಿದೆ. ಹನ್ನೊಂದು ಸದಸ್ಯರ ತಂಡದಲ್ಲಿ ಭಾರತ ಪ್ರಾಬಲ್ಯ ಮುಂದುವರಿಸಿದ್ದು, ಟೀಮ್ ಇಂಡಿಯಾದಿಂದ ಒಟ್ಟು ಐವರು ಕ್ರಿಕೆಟಿಗರು ಐಸಿಸಿ ಹೆಸರಿಸಿರುವ ತಂಡದಲ್ಲಿ ಸ್ಥಾನ ಪಡೆದಿಕೊಂಡಿದ್ದಾರೆ.
ಮತ್ತೊಂದೆಡೆ, ಹಾಲಿ ಚಾಂಪಿಯನ್ ಆಗಿ ಟೂರ್ನಿಗೆ ಪ್ರವೇಶಿಸಿ, ಒಂದೇ ಒಂದು ಗೆಲುವಿಲ್ಲದೆ ಭಾರಿ ಮುಖಭಂಗದೊಂದಿಗೆ ನಿರ್ಗಮಿಸಿದ ಪಾಕಿಸ್ತಾನದ ಯಾವೊಬ್ಬ ಆಟಗಾರನಿಗೂ ಸ್ಥಾನ ಸಿಕ್ಕಿಲ್ಲ. ಇದಲ್ಲದೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಅಥವಾ ಬಾಂಗ್ಲಾದೇಶದ ಒಬ್ಬ ಆಟಗಾರನು ಕೂಡ ಐಸಿಸಿ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.
ಟೀಮ್ ಇಂಡಿಯಾದ ನಂತರ, ನ್ಯೂಜಿಲೆಂಡ್ ಐಸಿಸಿ ಪ್ಲೇಯಿಂಗ್ ಇಲೆವೆನ್ನಲ್ಲಿ ಅತಿ ಹೆಚ್ಚು ನಾಲ್ಕು ಆಟಗಾರರನ್ನು ಹೊಂದಿದೆ. ಅದೇ ರೀತಿ, ಅಫ್ಘಾನಿಸ್ತಾನದಿಂದ ಇಬ್ಬರು ಆಟಗಾರರಿದ್ದಾರೆ. ಆದರೆ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಇದರಲ್ಲಿ ಸ್ಥಾನ ಪಡೆಯದಿರುವುದು ಗಮನಾರ್ಹ ಸಂಗತಿ. ಈ ತಂಡದ ನಾಯಕನಾಗಿ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್ ಅವರನ್ನು ಆಯ್ಕೆ ಮಾಡಲಾಗಿದೆ.
2025ರ ಚಾಂಪಿಯನ್ಸ್ ಟ್ರೋಫಿಯ ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ತಂಡಗಳು ಸ್ಪರ್ಧಿಸಿದವು. ಭಾರತ ಮತ್ತು ಕಿವೀಸ್ ತಂಡ ಸೆಮಿಫೈನಲ್ ಪ್ರವೇಶಿಸಿದವು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಬಿ ಗುಂಪಿನಿಂದ ಕಣಕ್ಕೆ ಇಳಿದವು. ಆಸೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್ಗೆ ತಲುಪಿದವು.
ಭಾರತವು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆಸೀಸ್ ತಂಡವನ್ನು ಎದುರಿಸಿ ಸುಲಭವಾಗಿ ಸೋಲಿಸಿತು ಮತ್ತು ಎರಡನೇ ಸೆಮಿಫೈನಲ್ನಲ್ಲಿ ಕಿವೀಸ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಫೈನಲ್ ತಲುಪಿತು. ಬಳಿಕ ಭಾನುವಾರ (ಮಾರ್ಚ್ 09) ದುಬೈನಲ್ಲಿ ನಡೆದ ಫೈನಲ್ನಲ್ಲಿ ರೋಹಿತ್ ನೇತೃತ್ವದ ಟೀಮ್ ಇಂಡಿಯಾ, ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ತಂಡವನ್ನು ನಾಲ್ಕು ವಿಕೆಟ್ಗಳಿಂದ ಸೋಲಿಸಿ ಚಾಂಪಿಯನ್ ಆಯಿತು.
ಈ ಪಂದ್ಯದಲ್ಲಿ 76ರನ್ ಗಳಿಸಿದಂತಹ ಭಾರತದ ನಾಯಕ ರೋಹಿತ್ ಶರ್ಮ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಎರಡು ಶತಕಗಳ ನೆರವಿನಿಂದ 263 ರನ್ ಗಳಿಸಿದ ಕಿವೀಸ್ ಯುವ ಆಟಗಾರ ರಾಚಿನ್ ರವೀಂದ್ರ ಟೂರ್ನಿಯ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ಟೂರ್ನಮೆಂಟ್ ತಂಡದ ಮಾಹಿತಿ:
ರಾಚಿನ್ ರವೀಂದ್ರ (ನ್ಯೂಜಿಲೆಂಡ್), ಇಬ್ರಾಹಿಂ ಜದ್ರಾನ್ (ಅಫ್ಘಾನಿಸ್ತಾನ), ವಿರಾಟ್ ಕೊಹ್ಲಿ (ಭಾರತ), ಶ್ರೇಯಸ್ ಅಯ್ಯರ್ (ಭಾರತ), ಕೆಎಲ್ ರಾಹುಲ್ (ಭಾರತ), ಗ್ರೆನ್ ಫಿಲಿಪ್ಸ್ (ನ್ಯೂಜಿಲೆಂಡ್), ಅಜ್ಜತುಲ್ಲಾ ಒಮರ್ಜೈ (ಅಫ್ಘಾನಿಸ್ತಾನ), ಮಿಚೆಲ್ ಸ್ಯಾಂಟ್ನರ್ (ನಾಯಕ, ನ್ಯೂಜಿಲೆಂಡ್), ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್), ವರುಣ್ ಚಕ್ರವರ್ತಿ (ಭಾರತ)
12ನೇ ಆಟಗಾರ: ಅಕ್ಷರ್ ಪಟೇಲ್ (ಭಾರತ)