ಬೆಳಗಾವಿ:ನಮ್ಮೂರ ಬಾನುಲಿ ರೇಡಿಯೋ ಕೇಂದ್ರದಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಲು ಯತ್ನಿಸಿದ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ಬದುಕಿಸಿದ ಬಾಲಿಕಾ ಆದರ್ಶ ಶಾಲೆಯ ವಿದ್ಯಾರ್ಥಿನಿ ಸ್ಫೂರ್ತಿ ಸವ್ವಾಶೇರಿ ಇವರ ಸಂದರ್ಶನ ಮಾಡಲಾಯಿತು. ಶಾಲಾ ಬಾಲಕಿ, ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಮತ್ತು ಇಬ್ಬರು ಚಿಕ್ಕ ಮಕ್ಕಳನ್ನು ಬದುಕಿಸಿ ಸಮಾಜಕ್ಕೆ ಮಾದರಿಯಾಗಿದ್ದಾಳೆ.
ಬೆಳಗಾವಿಯ ಬಾಲಿಕಾ ಆದರ್ಶ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಸ್ಫೂರ್ತಿ ವಿಶ್ವನಾಥ್ ಸವ್ವಾಶೇರಿ ಅವರು, ಚಲಿಸುವ ರೈಲಿಗೆ ಹೆತ್ತ ಕುಡಿಗಳೊಂದಿಗೆ ತಲೆ ಕೊಡಲು ಮುಂದಾಗಿದ್ದ ಗೃಹಿಣಿಯೋರ್ವರನ್ನ ತನ್ನ ಸಮಯಪ್ರಜ್ಞೆ ಮೂಲಕ ರಕ್ಷಿಸಿದ್ದಾಳೆ.
ಹೌದು, ಕಳೆದ ಆಗಸ್ಟ್ 22ರಂದು ರಾತ್ರಿ 8.30ರ ಸಮಯದಲ್ಲಿ ಸ್ಫೂರ್ತಿ ತನ್ನ ತಂದೆ-ತಾಯಿ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಕಾಂಗ್ರೆಸ್ ರಸ್ತೆಯ ರೈಲ್ವೆ ಫಸ್ಟ್ ಗೇಟ್ ಬಳಿ ಓರ್ವ ಅಪರಿಚಿತ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡಳು. ಮಹಿಳೆ ತನ್ನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಳೆಂದು ಸಂಶಯ ಬಂದು ಸ್ಫೂರ್ತಿ, ತಕ್ಷಣವೇ ಕಾರಿನಿಂದ ಇಳಿದು ಓಡಿ ಅವರ ಬಳಿ ಹೋಗುವುದಲ್ಲದೆ, ಅಲ್ಲಿಯೇ ಹೋಗುತ್ತಿದ್ದ ಜನರನ್ನ ಕೂಗಿ ಕರೆದು, ಅವರ ಸಹಾಯದಿಂದ ಮೂವರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬರುವಲ್ಲಿ ಬಾಲಕಿ ಯಶಸ್ವಿಯಾಗಿದ್ದಳು. ಆ ಬಳಿಕ ಸಂಬಂಧಿಕರ ಮೂಲಕ ಅವರನ್ನು ಸುರಕ್ಷಿತವಾಗಿ ಮನೆಗೆ ಮುಟ್ಟಿಸಿದ ನಂತರವೇ ಸ್ಫೂರ್ತಿ ನಿಟ್ಟುಸಿರು ಬಿಟ್ಟಳು. ಈ ರೀತಿ ಸ್ಫೂರ್ತಿಯ ಮಾನವೀಯತೆಯಿಂದ ಬಡ ಜೀವಗಳು ಸಾವಿನ ದವಡೆಯಿಂದ ಪಾರು ಮಾಡಿದೆ.
ಬಾಲಕಿ ಸ್ಫೂರ್ತಿ ಸವ್ವಾಶೇರಿ ಮಾನವೀಯ ಕಾರ್ಯವನ್ನು ಮೆಚ್ಚಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಿನಂದಿಸಿ, 5 ಸಾವಿರ ರೂ. ನಗದು ಬಹುಮಾನ ನೀಡಿದ್ದಾರೆ. ಇಲ್ಲೂ ಮಾನವೀಯತೆಯನ್ನೇ ಪ್ರದರ್ಶಿಸಿರುವ ಸ್ಫೂರ್ತಿ, “ಇದು ನಾನು ದುಡಿದ ಹಣವಲ್ಲ. ಹಾಗಾಗಿ, ಆ ಮಹಿಳೆಯ ಕಷ್ಟಕ್ಕೆ ನೆರವಾಗಲಿ” ಎಂದು ದಿನಬಳಕೆ ವಸ್ತುಗಳನ್ನು ಕೊಡಿಸಿ, ಉಳಿದ ಹಣವನ್ನೂ ಅವರಿಗೆ ನೀಡಿದ್ದಾಳೆ. ಅಲ್ಲದೇ ಇನ್ಮುಂದೆ ಆತ್ಮಹತ್ಯೆಯಂಥ ಕೆಟ್ಟ ನಿರ್ಧಾರಕ್ಕೆ ಎಂದೂ ಮುಂದಾಗಬಾರದು ಎಂದು ಧೈರ್ಯವನ್ನು ತುಂಬಿದ್ದಾಳೆ.
ಓರ್ವ ಅಪರಿಚಿತ ಮಹಿಳೆ ಮತ್ತು ಇಬ್ಬರು ಮಕ್ಕಳನ್ನು ತನ್ನ ಸಮಯಪ್ರಜ್ಞೆ ಮೂಲಕ ನಮ್ಮ ಬೆಳಗಾವಿಯ ವಿದ್ಯಾರ್ಥಿನಿ ಸ್ಫೂರ್ತಿ ಸವ್ವಾಶೇರಿ ರಕ್ಷಿಸಿದ್ದು, ನಮ್ಮ ಜಿಲ್ಲೆಗೆ ಹೆಮ್ಮೆ ಮತ್ತು ಕೀರ್ತಿ ತಂದಿದ್ದಾಳೆ.