ಕುಷ್ಟಗಿ: ತಾಲೂಕಿನ ವಣಗೇರಾ ಗ್ರಾಮದ ಇಕ್ಕಟ್ಟಾದ ಶಾಲೆಯಲ್ಲಿ ಪಾಠ ಕೇಳಲು ಮಕ್ಕಳ ಪಡಿಪಾಟಲು ನೋಡಲಾಗದೇ ಸ್ವತಹ ಗ್ರಾಮಸ್ಥರು, ಗ್ರಾಮದೇವತೆ ಶ್ರೀ ಶಿವನಮ್ಮ ಜಿ ದೇವಿ ಜಾತ್ರೆಯಲ್ಲಿ ಉಳಿಸಿದ ಹಣದಲ್ಲಿ ಮೂರು ಕೊಠಡಿಗಳನ್ನು ನಿರ್ಮಿಸಿ ಶೈಕ್ಷಣಿಕ ಕಾಳಜಿ ತೋರಿದ್ದಾರೆ.
ಗ್ರಾಮದ ಮಾದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 8ನೇ ತರಗತಿಯಲ್ಲಿ 380 ಮಕ್ಕಳು ಕಲಿಯುತ್ತಿದ್ದಾರೆ. ಈಗಿರುವ 20 ಗುಂಟೆ ಸೀಮಿತ ಜಾಗೆಯಲ್ಲಿ 10 ಕೊಠಡಿಗಳಿದ್ದರೂ ಮಕ್ಕಳು ಸ್ಥಳದ ಅಭಾವ ಇತ್ತು. ಇದಕ್ಕೆ ಪರ್ಯಾಯ ಕ್ರಮಕ್ಕೆ ಸದರಿ ಶಾಲೆಯ ಜಮೀನು ಖಾಸಗಿ ಮಾಲಿಕತ್ವದಲ್ಲಿರುವ ಹಿನ್ನೆಲೆಯಲ್ಲಿ ಕಟ್ಟಡ ವಿಸ್ತರಣೆ ಅಸಾಧ್ಯವಾಗಿತ್ತು.
ಈ ಪರಿಸ್ಥಿತಿಯಲ್ಲಿ ಸದರಿ ಶಾಲೆಗೆ ಎಲ್ ಕೆಜಿ, ಯುಕೆಜಿ ಮಂಜೂರಾಗಿದ್ದರಿಂದ ಮಕ್ಕಳನ್ನು ಎಲ್ಲಿ ಕೂರಿಸಬೇಕೆಂಬ ಚಿಂತೆ ಕಾಡಿತ್ತು. ಗ್ರಾಮಕ್ಕೆ ಹೊಂದಿಕೊಂಡ ಸರ್ಕಾರ ಸ.ನಂ.149ರ ಒಟ್ಟು 23 ಎಕರೆ 17 ಗುಂಟೆ ಗಾಯರಾಣಾ ಜಾಗೆ ತಿಪ್ಪೆ ಸಂಗ್ರಹಕ್ಕೆ ಬಳಕೆಯಲ್ಲಿತ್ತು. ಈ ಜಾಗೆಯನ್ನು ಶೈಕ್ಷಣಿಕ ಕಾರ್ಯ ಬಳಸಿಕೊಳ್ಳುವ ಗ್ರಾಮಸ್ಥರ ಆಲೋಚನೆಗೆ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಈಗಾಗಲೇ 5 ಎಕರೆ ಜಮೀನು ಮಂಜೂರು ಮಾಡಲು ಬೇಡಿಕೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಶಾಸಕರು, ತಹಶೀಲ್ದಾರರು ತಾತ್ವಿಕ ಭರವಸೆ ನೀಡಿದ್ದು, ಸದರಿ ಜಾಗೆ ಮಂಜೂರಾಗುವ ನಿರೀಕ್ಷೆ ಇದೆ.
ಈ ಪ್ರಯತ್ನದ ನಡುವೆ ಗ್ರಾಮಸ್ಥರು ಗ್ರಾಮದೇವತೆ ಶ್ರೀ ಶಿವನಮ್ಮ ದೇವಿ ಜಾತ್ರೆಯಲ್ಲಿ ಪ್ರತಿ ವರ್ಷ ಉಳಿಸಿದ ಹಣವನ್ನು ಎಲ್.ಕೆ.ಜಿ., ಯು.ಕೆ.ಜಿ., 1ನೇ ತರಗತಿ ಮಕ್ಕಳಿಗೆ ಮೂರು ಕೊಠಡಿ ನಿರ್ಮಾಣಕ್ಕೆ ಬಳಸಲಾಗಿದೆ. ಕಳೆದ ಜೂನ್ ತಿಂಗಳಿನಿಂದ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಿದ್ದು, ಸದ್ಯ ಕಟ್ಟಡ ನಿರ್ಮಾಣ ಕಾರ ಪೂರ್ಣಗೊಂಡಿದೆ. ಸರ್ಕಾರಿ ವೆಚ್ಚದಲ್ಲಿ 50 ಲಕ್ಷ ರೂ.ಗಳಲ್ಲಿ ನಿರ್ಮಾಣವಾಗುವ ಶಾಲಾ ಕಟ್ಟಡವನ್ನು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಬರೀ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವುದು ಒಂದು ಮಾದರಿ. ನಮ್ಮ ಸಮುದಾಯವೇ ಸರಕಾರಿ ಶಾಲೆಗಳ ಶಕ್ತಿ. ನಮ್ಮಆದ್ಯತೆಗಳು ಬದಲಾದರೆ ಸಾಕು ಭವಿಷ್ಯ ಬದಲಾಗುತ್ತದೆ.