ಮಜಲಟ್ಟಿ: ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಸದೃಡ ಭಾರತಕ್ಕಾಗಿ ಸೈಕ್ಲಿಂಗ್ ಕಾರ್ಯಕ್ರಮವನ್ನು ಪದವಿ ಪೂರ್ವ ಕಾಲೇಜಿನಿಂದ ಕೋಥಳಿ-ಕುಪ್ಪನವಾಡಿಯವರೆಗೆ ಶಾಂತಿಗಿರಿ ಸೈಕ್ಲಿಂಗ್ ಮಾಡಲಾಯಿತು.ಮಜಲಟ್ಟಿಯ ಯುವಧುರೀಣರಾದ ರುದ್ರಪ್ಪಾ ಸಂಗಪ್ಪಗೋಳ ಸೈಕಲ್ ಚಲಾಯಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದಾರಿ ಮಾರ್ಗದ ಜನಸಂದಣಿ ಇರುವಲ್ಲಿ ಯುವಭಾರತ, ಸದೃಡ ಭಾರತಕ್ಕಾಗಿ ಘೋಷವಾಕ್ಯಗಳ ಮೂಲಕ ಅರಿವನ್ನುಂಟು ಮಾಡಲಾಯಿತು. ಶಾಂತಿಗಿರಿ ತಲುಪಿದ ಬಳಿಕ ಅಲ್ಲಿಯ ಪ್ರೇಕ್ಷಣೀಯ ಸ್ಥಳದ ವಿಕ್ಷಣೆ ಮಾಡಲಾಯಿತು.
ಶಾಂತಗಿರಿಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಯುವಕರಿಗೆ ಮಾದರಿಯಾಗಿರುವ ಮಲಿಕವಾಡ ಗ್ರಾಮದ ರೈತ ರಾಜಶೇಖರ ಬಾಕಳೆಯವರನ್ನು ಸತ್ಕರಿಸಿ ಗೌರವಿಸಲಾಯಿತು. ರಾಜಶೇಖರ ಬಾಕಳೆಯವರು ಕೃಷಿ ಕಾಯಕದ ಜೊತೆಗೆ ದಿನಂಪ್ರತಿ ಬೆಳಿಗ್ಗೆ 20-25 ಕೀ.ಮೀ ಗಳಷ್ಟು ಸೈಕಲ್ ಸವಾರಿ ಮಾಡುವ ಹವ್ಯಾಸ ಇಟ್ಟುಕೊಂಡಿದ್ದಾರೆ.
ಅಲ್ಲದೇ ಅವರು ಆಗಾಗ ಬಿಡುವಿನ ಅವಧಿಯಲ್ಲಿ ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದಿಂದ ವಾರಣಾಸಿವರೆಗೆ, ಪಂಜಾಬನ ಅಮೃತಸರದ ಸುವರ್ಣಮಂದಿರವರೆಗೆ, ಕನ್ಯಾಕುಮಾರಿವರೆಗೆ ಬೇರೆ ಬೇರೆ ಹಂತಗಳಲ್ಲಿ ಸೈಕಲ್ ಸವಾರಿ ಮಾಡುವುದರ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ದಿನನಿತ್ಯ ಯಾವುದಾದರೊಂದು ದೈಹಿಕ ಶ್ರಮದ ಕ್ರೀಡೆಯನ್ನು ರೂಢಿಸಿಕೊಳ್ಳಬೇಕು ಎಂದು ಯುವಕರಿಗೆ ಸಂದೇಶ ನೀಡುತ್ತಾರೆ.
ಕರ್ನಾಟಕ ಸರ್ಕಾರದ ಸರ್ಕಾರಿ ನೌಕರರು ಮತ್ತು ಅರೆ ಸರ್ಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷರಾದ ಡಾ.ವಿಶ್ವನಾಥ ಧುಮಾಳೆಯವರು ಮಾತನಾಡುತ್ತಾ, ಯುವಕರು ಸದೃಡ ಭಾರತಕ್ಕಾಗಿ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಉಪನ್ಯಾಸಕರಾದ ಅಜೀತ ಬಸ್ಸರಗಿಯವರು ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು.ಜಿಲ್ಲಾ ಹೋರಾಟಗಾರ ಸಮಿತಿಯ ಮುಖ್ಯ ಕಾರ್ಯದರ್ಶಿಗಳಾದ ಸುರೇಶ ಬ್ಯಾಕೂಡ, ಉಪನ್ಯಾಸಕರಾದ ಎಂ.ಎ.ಮುಲ್ಲಾ, ಮಲ್ಲಿಕಾರ್ಜುನ ಜೋಡಟ್ಟಿ, ಶಿವರಾಜ ಮಡ್ಡೆ ಉಪಸ್ಥಿತರಿದ್ದರು.
ರುದ್ರಪ್ಪ ಸಂಗಪ್ಪಗೋಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಹನಮಂತ ಟಕ್ಕನ್ನವರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.