ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಯೋಧ ಪ್ರವೀಣ ಸುಭಾಷ ಖಾನಗೌಡ್ರ (24) ಬುಧವಾರ ಚೆನ್ನೈನ ಭಾರತೀಯ ನೌಕಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಚಾನಕ್ಕಾಗಿ ತಲೆಗೆ ಗುಂಡು ತಗುಲಿ ಮರಣ ಹೊಂದಿದ್ದಾರೆ.
ಪ್ರವೀಣ 2020ರ ಫೆ.12ರಂದು ಭಾರತೀಯ ನೌಕಾಪಡೆಗೆ ಸೇರಿದ್ದರು. ಕೊಚ್ಚಿ, ಅಂಡಮಾನ್‌ದಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ಚೆನ್ನೈಗೆ ವರ್ಗವಾಗಿದ್ದರು. ಕಾಕತಾಳೀಯ ಎಂಬಂತೆ ಫೆ.12ರಂದೇ ನಿಧನರಾಗಿದ್ದಾರೆ. ಅವರ ತಂದೆ ಸುಭಾಷ, ತಾಯಿ ಮಹಾದೇವಿ ಇಬ್ಬರೂ ಸಹ ಕೃಷಿಕರು.
ಸಾಯುವುದಕ್ಕೆ ಒಂದು ತಾಸಿಗೆ ಮುನ್ನ ಅವರು ತಾಯಿ ಹಾಗೂ ಅಣ್ಣನೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ್ದರು. ಆರೋಗ್ಯವಾಗಿ ಇರುವುದಾಗಿ ಹೇಳಿದ್ದರು. ಆದರೆ ಬಳಿಕ ತಲೆಗೆ ಗುಂಡು ತಾಗಿ ಸತ್ತಿದ್ದಾರೆ ಎಂಬ ಸುದ್ದಿ ಬಂತು. ಇದು ‘ಮಿಸ್ ಫೈರ್’ ಎಂದು ಸೇನಾಧಿಕಾರಿಗಳು ತಿಳಿಸಿದ್ದು, ತನಿಖೆ ನಡೆಯುತ್ತಿದೆ. ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಫೆ.14ರಂದು ಬೆಳಿಗ್ಗೆ ಕಳೆಬರವನ್ನು ಸಂಗನಕೇರಿ ಗ್ರಾಮದಿಂದ ಕಲ್ಲೋಳಿಯವರೆಗೆ ಮೆರವಣಿಗೆ ಮೂಲಕ ತರಲಾಗುವುದು. ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು. ಬೆಳಿಗ್ಗೆ 11ಕ್ಕೆ ಕಲ್ಲೋಳಿ ಪಂಚಾಯಿತಿ ಪಕ್ಕದ ಜಾಗದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.