ಬೆಳಗಾವಿ: ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಸಪ್ತಾಹಿಕ ಸತ್ಸಂಗದ ಕಾರ್ಯಕ್ರಮವು ಭಕ್ತಿಭಾವದಿಂದ ಹಾಗೂ ಆಧ್ಯಾತ್ಮಿಕ ಚಿಂತನೆಗಳಿಂದ ಹೊಕ್ಕಿದ್ದು, ವಿವಿಧ ಉಪನ್ಯಾಸಗಳು ಮತ್ತು ವಚನ ವಾಚನದೊಂದಿಗೆ ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ಭಾಷಣದಲ್ಲಿಯೇ ಲಲಿತಾ ರುದ್ರೇಗೌಡರು “ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಯೋಗದ ಅಗತ್ಯತೆಯು ಬಹಳ ಮಹತ್ವದ್ದಾಗಿದೆ. ಅನುಲೋಮ ವಿಲೋಮ, ಓಂಕಾರ, ಭ್ರಮರಿ ಮತ್ತು ಧ್ಯಾನದಂತಹ ಯೋಗ ಅಭ್ಯಾಸಗಳು ನಾಡಿಗಳ ಶುದ್ಧತೆಗೆ ಹಾಗೂ ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉತ್ತಮವಾಗಿದೆ. ಇದರೊಂದಿಗೆ ವ್ಯಕ್ತಿಗೆ ನೆಮ್ಮದಿಯ ಜೀವನವೂ ಲಭಿಸುತ್ತದೆ” ಎಂದು ವಿವರಿಸಿದರು.
ವಚನ ವಿಶ್ಲೇಷಕ ವಸಂತಕ್ಕಾ ಗಡ್ಕರಿಯವರು, “ಇಳೆ ಮಳೆ ಬೆಳೆ ದಾನವಾಗಿ ಕೊಡುವ ದೇವರು ಮಾನವನಿಂದ ಯಾವುದೇ ಆಸೆಪಟ್ಟುಕೊಳ್ಳುವುದಿಲ್ಲ. ಶುದ್ಧ ಮನಸ್ಸು ಮತ್ತು ಭಕ್ತಿಯೊಂದಿಗೆ ಪೂಜೆ ಮಾಡುವುದು ಸಾಕು. ಹೀಗೆ ಮಾಡಿದರೆ ದೇವರ ಅನುಗ್ರಹ ದೊರೆಯುತ್ತದೆ. ಹರಕೆ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದು ತಪ್ಪು” ಎಂದು ನುಡಿದರು. ಅವರು “ಬೇಡುವಾತ ದೇವರಲ್ಲ, ಕುರಿ ಬೇಡ ಮರಿ ಬೇಡ ಮರೆಯದೆ ಪೂಜಿಸು ಕೂಡಲಸಂಗಮದೇವನ” ಎಂಬ ವಚನದ ಉದಾಹರಣೆಯ ಮೂಲಕ ಭಕ್ತಿಯ ಶುದ್ಧತೆಯ ಮಹತ್ವವನ್ನು ವಿವರಿಸಿದರು.
ಸುನಿತಾ ನಂದೆಣ್ಣವರು, ಸರ್ವಜ್ಞನ ವಚನವನ್ನು ವಿವರಿಸುತ್ತ, “ಮನಸ್ಸು ಮರ್ಕಟದಂತೆ ಅಸ್ಥಿರವಾಗಿರುತ್ತದೆ. ಅದನ್ನು ನಿಯಂತ್ರಿಸಿ ದೇವರಲ್ಲಿ ನೆಲೆಗೊಳ್ಳುವಂತೆ ಮಾಡಿದರೆ ನಿಜವಾದ ಆನಂದ ಸಿಗುತ್ತದೆ” ಎಂದರು.
ಪ್ರೂ ಘೀವಾರಿಯವರು, “ಅರಿವು ಎಂದರೆ ಜಾಗೃತಿ, ಪ್ರಜ್ಞೆ, ಜ್ಞಾನ. ಜ್ಞಾನಕ್ಕಿಂತ ಶ್ರೇಷ್ಠವಾದುದು ಇಲ್ಲ. ಲೌಕಿಕ, ಮಾನಸಿಕ, ಬೌತಿಕ, ಕನಸುಗಳ ಅರಿವುಗಳ ಮೂಲಕ ಬ್ರಹ್ಮಜ್ಞಾನಕ್ಕೆ ತಲುಪುವುದು ಸಾಧ್ಯ” ಎಂದು ತಮ್ಮ ಅನುಭವ ಹಂಚಿಕೊಂಡರು.
ಏಣಗಿ ಮಠ ಅವರು, “ಮೊದಲು ನಮ್ಮನ್ನು ನಾವು ಅರಿಯಬೇಕು, ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಬೇಕು ಮತ್ತು ನಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು” ಎಂದು ಜೀವನದ ಒಳನೋಟವನ್ನು ನೀಡಿದರು.
ಈ ಸಂದರ್ಭದಲ್ಲಿ ಶಂಕರ ಶೆಟ್ಟಿ ಹಾಗೂ ಪ್ರೇಮಾ ಪುರಾಣಿಕ ಮಠ ಅವರು ವಚನ ವಾಚನ ಮಾಡಿದರು. ನಾಗರತ್ನಾ ಪಾಟೀಲರು ವಚನ ಗಾಯನ ಮಾಡುವ ಮೂಲಕ ಶ್ರೋತೃಗಳ ಮನಗೆದ್ದರು. ನಿರೂಪಣೆಯನ್ನು ಶರಣ ಕಟ್ಟಿಮನಿ ನಿರ್ವಹಿಸಿದರು ಹಾಗೂ ಪ್ರಾರ್ಥನೆ ಕಾರ್ಯವನ್ನು ಸುನಿತಾ ನಂದೆಣ್ಣವರ, ಶೋಭಾ ಶಿವಳ್ಳಿ, ಲಲಿತಾ ರುದ್ರೇಗೌಡರ ಮತ್ತು ರೇಖಾ ಮುದ್ದಾಪುರ ನಿರ್ವಹಿಸಿದರು.
ಸಂಘದ ಸದಸ್ಯರು, ಶರಣರು ಹಾಗೂ ಶ್ರದ್ಧಾಳು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸತ್ಸಂಗವನ್ನು ಆಧ್ಯಾತ್ಮಿಕವಾಗಿ ವೈಭವೀಕರಿಸಿದರು.