ಕಲಬುರಗಿ: ಇಲ್ಲಿನ ಮಾಣಿಕೇಶ್ವರಿ ಕಾಲೊನಿಯ ನಿವಾಸಿಯಾದ ಯುವ ವೈದ್ಯ ಅಭಿಷೇಕ್ ಪಾಟೀಲ ಅವರು ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದು, ದೇಹವನ್ನು ಅವರ ಕುಟುಂಬದವರು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮೃತರು ಖಣದಾಳ ಸರ್ಕಾರಿ ಪ್ರೌಢಶಾಲೆಯ ಪ್ರಥಮ ದರ್ಜೆ ಸಹಾಯಕ ನಿರಂಜನ ಪಾಟೀಲ ಹಾಗೂ ಭಾಗ್ಯವತಿ ದಂಪತಿಯ ಪುತ್ರ. ದಂಪತಿಯು ಮೂಲತಃ ಕಮಲಾಪುರ ತಾಲ್ಲೂಕಿನ ನವನಿಹಾಳ ಗ್ರಾಮದವರಾಗಿದ್ದು, ಮಾಣಿಕೇಶ್ವರಿ ಕಾಲೊನಿಯಲ್ಲಿ ವಾಸವಾಗಿದ್ದರು.
ಅಭಿಷೇಕ್ ಅವರು ಎಂಬಿಬಿಎಸ್ ಮುಗಿಸಿದ್ದು, ಎಂಡಿ ಪ್ರವೇಶಾತಿ ಪರೀಕ್ಷೆಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದರು. ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ವಾಹನ ಚಾಲನೆಯ ಪರವಾನಿಗೆ ಪ್ರಮಾಣ ಪತ್ರ ಪಡೆಯುವಾಗಲೇ ತಮ್ಮ ಮರಣದ ನಂತರ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಅಭ್ಯಾಸಕ್ಕಾಗಿ ಶರೀರ ದಾನ ಮಾಡುವುದಾಗಿ ಸ್ವಇಚ್ಛೆಯಿಂದ ಬರೆದುಕೊಟ್ಟಿದ್ದರು. ಆಗಾಗ ಮನೆಯಲ್ಲಿ ಪೋಷಕರಿಗೂ ದೇಹ ದಾನದ ಮಹತ್ವ ಬಗ್ಗೆ ತಿಳಿಸುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತನ ಇಚ್ಛೆಯಂತೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿಗೆ (ಎಂಆರ್‌ಎಂಸಿ) ದೇಹವನ್ನು ಹಸ್ತಾಂತರ ಮಾಡಲಾಗಿದೆ. ಹಸ್ತಾಂತರಕ್ಕೂ ಮುನ್ನ ಬಂಧುಗಳು, ಮಿತ್ರರು, ಶಿಕ್ಷಕ ವೃಂದದವರು ಅಂತಿಮ ದರ್ಶನ ಪಡೆದರು. ಸರ್ವ ವಿಧಿ-ವಿಧಾನಗಳನ್ನು ಪೂರೈಸಲಾಯಿತು ಎಂದು ತಿಳಿದುಬಂದಿದೆ.