ಕೊಪ್ಪಳ: ಕೊಪ್ಪಳದ ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ ಮತ್ತು ಶಿಕ್ಷಣ ಸಂಸ್ಥೆ (ರಿ) ಘೋಷಿಸಿರುವ 2025ನೇ ಸಾಲಿನ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿಗೆ ಬೆಳಗಾವಿಯ ಡಾ. ಮೈತ್ರೇಯಿಣಿ ಗುರುನಗೌಡ ಗದಿಗೆಪ್ಪಗೌಡರರ “ನುಂಗಿದಷ್ಟು ನಂಜು” ಕವನ ಸಂಕಲನ ಆಯ್ಕೆಯಾಗಿದೆ. ಮುಂಬೈನ ಅನಿತಾ ಪಿ. ತಾಕೊಡೆ ಅವರ “ಮೇಣಕ್ಕಂಟಿದ ಬತ್ತಿ” ಕೂಡ ಪ್ರಶಸ್ತಿ ಪುರಸ್ಕೃತ ಕೃತಿಯಾಗಿದೆ.
61 ಕವನ ಹಸ್ತಪ್ರತಿಗಳ ಪೈಕಿ ಭಾಷೆಯ ನಾಟಕೀಯತೆ, ವೈಚಾರಿಕತೆ ಮತ್ತು ಜೀವಂತ ಸಾಮಾಜಿಕ ಅಂಶಗಳ ಆಳತೆಗೆ ಈ ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ತಿಳಿಸಿದೆ. ಪ್ರತಿಯೊಬ್ಬ ವಿಜೇತರಿಗೆ ₹6,000 ನಗದು ಹಾಗೂ ಸ್ಮರಣಿಕೆಯನ್ನು ನವೆಂಬರ್‌ನಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರದಾನ ಮಾಡಲಾಗುವುದು.
ಡಾ. ಮೈತ್ರೇಯಿಣಿ: ಸಾಹಿತ್ಯ, ಸಂಶೋಧನೆ ಮತ್ತು ಸಮಾನತೆಗಾಗಿ ಶ್ರಮಿಸಿದ ಹೆಮ್ಮೆಯ ಕವಯತ್ರಿ:
ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ಪ್ರಖ್ಯಾತ ಸಾಹಿತಿ, ವಿಮರ್ಶಕಿ, ಸಂಶೋಧಕಿ ಹಾಗೂ ಶಿಕ್ಷಕಿ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸಾರಾಂಗದ ಸಹನಿರ್ದೇಶಕಿಯಾಗಿ 11 ವರ್ಷಗಳ ಸೇವೆ ಸಲ್ಲಿಸಿದ ಅನುಭವವು ಇವರನ್ನು ಭಾಷಾ ಶಕ್ತಿಯ ವಿಸ್ತೃತ ಕ್ಷೇತ್ರಕ್ಕೆ ಪರಿಚಯಿಸಿದೆ.
ಅವರು ಹಳಗನ್ನಡ, ವಚನ ಸಾಹಿತ್ಯ, ಜಾನಪದ ಸಾಹಿತ್ಯ, ಆಧುನಿಕ ಮಹಿಳಾ ಸಾಹಿತ್ಯ ಹಾಗೂ ಭಾಷಾಶಾಸ್ತ್ರದ ಔದಾರ್ಯವನ್ನು ತಮ್ಮ ಕೃತಿಗಳಲ್ಲಿ ಜೀವಂತವಾಗಿ ಪ್ರತಿಬಿಂಬಿಸಿದ್ದಾರೆ. “ನಮ್ಮ ಮಹಿಳೆ ನಮ್ಮ ಹೆಮ್ಮೆ”, “ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ” ಮುಂತಾದ ಪಠ್ಯಪುಸ್ತಕಗಳ ಸಂಪಾದನೆ ಮಾಡಿದ ಅವರು, ಎಂ.ಡಿ. ಗೋಗೇರಿ ಸಮಗ್ರ ಸಾಹಿತ್ಯದ ಕುರಿತು ಪಿಎಚ್‌ಡಿ ಸಂಶೋಧನೆ ಮಾಡಿದ್ದಾರೆ.
ಕವನ ಸಂಕಲನಗಳಲ್ಲಿ “ನುಂಗಿದಷ್ಟು ನಂಜು”, “ಗರಿಕೆ ಅಲಗಿನ ಇಬ್ಬನಿ”, “ನೀರು ಕಚ್ಚಿದ ಕೆಂಡ” ಇತ್ಯಾದಿ ಜನಮಾನಸದಲ್ಲಿ ಗುರುತಿಸಿಕೊಂಡಿವೆ. ಅವರು ಸಂಪಾದಿಸಿದ ಉರಿಯೊಡಲು, ಜೀವನ್ಮುಖಿ, ಸಿರಿಗಂಧ, ಧರೆಗಿಳಿದ ಶರಣೆಯರು, ಕಾವ್ಯದರಮನೆಯೊಳಗೆ ಮುಂತಾದ ಕೃತಿಗಳು ಸಾಹಿತ್ಯ ಪ್ರಪಂಚಕ್ಕೆ ಮೌಲ್ಯವರ್ಧನೆ ಮಾಡಿವೆ.
ಅವರ ಅಚ್ಚಿನಲ್ಲಿ ಇರುವ ಪ್ರಮುಖ ಕೃತಿಗಳಲ್ಲಿ “ಸಾವಿನ ಮನೆಯ ಮಹಡಿಯ ಮೇಲೆ”, “ಎದೆಯ ಅಳತೆಯ ರವಿಕೆ”, “ತಿಟ್ಹತ್ತಿ ತಿರುಗಿ”, “ಮನಕರಗದವರಲ್ಲಿ”, ಮಕ್ಕಳ ಸಾಹಿತ್ಯ ಕೃತಿ “ದೇವಲೋಕದ ಸರಕು” ಸೇರಿವೆ. 1000ಕ್ಕೂ ಹೆಚ್ಚು ಉಪನ್ಯಾಸಗಳು, 100ಕ್ಕೂ ಅಧಿಕ ವಿಮರ್ಶಾ ಮತ್ತು ಸಂಶೋಧನಾ ಲೇಖನಗಳು ಪ್ರಕಟವಾಗಿದ್ದು, ಇವರ ವಾಙ್ಮಯ ಸೇವೆಯನ್ನು ಹಿರಿದಾಗಿಸಿದೆ. ರಾಜ್ಯೋತ್ಸವ ಪ್ರಶಸ್ತಿ, ಬೇಂದ್ರೆ ನುಡಿಸಿರಿ, ಅಂತರರಾಷ್ಟ್ರೀಯ ಬಸವ ಸಿರಿ, ಗೋವಿಂದ ಪೈ ಕಾವ್ಯ ಪ್ರಶಸ್ತಿ, ನಿರುಪಮಾ ಕಥಾ ಪ್ರಶಸ್ತಿ, ಸುವರ್ಣ ಕರ್ನಾಟಕ ಕನ್ನಡ ರತ್ನ ಸೇರಿ 25ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಅವರು ರಷ್ಯಾ, ಇಟಲಿ, ಸ್ವಿಟ್ಜರ್‌ಲ್ಯಾಂಡ್, ಫ್ರಾನ್ಸ್ ಮುಂತಾದ ದೇಶಗಳಲ್ಲಿ ಅಂತರರಾಷ್ಟ್ರೀಯ ಕವಿಯತ್ರಿ ಸಮ್ಮೇಳನಗಳಲ್ಲಿ ಪಾಲ್ಗೊಂಡು ಭಾರತದ ಕವಿತ್ವವನ್ನು ಜಾಗತಿಕ ವೇದಿಕೆಯಲ್ಲಿ ಪ್ರತಿಷ್ಠಿತವಾಗಿ ಪ್ರಚಾರ ಮಾಡಿದ್ದಾರೆ. 2018ರ ಹುಬ್ಬಳ್ಳಿಯ ಅಖಿಲ ಕರ್ನಾಟಕ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ.
ಗ್ರಾಮೀಣ ಮಹಿಳೆಯ ದೈನ್ಯ, ಧ್ವನಿ ಮತ್ತು ಸಂವೇದನೆಗೆ ಸಾಹಿತ್ಯದ ಮುಖವನ್ನೇ ನೀಡಿದ ಇವರು, ಸಾಹಿತ್ಯವನ್ನು ಸಾಮಾಜಿಕ ನ್ಯಾಯದ ಅಸ್ತ್ರವನ್ನಾಗಿ ರೂಪಿಸಿದ್ದಾರೆ. ಅವರ ಲೇಖನ ಶೈಲಿ, ನುಡಿಮುತ್ತುಗಳಂತೆ ಹೊಳೆಯುವ ಭಾಷೆ ಮತ್ತು ಕಳಕಳಿಯ ಸ್ಪಂದನವು ಹೊಸ ಲೇಖಕರಿಗೆ ಸ್ಫೂರ್ತಿ ನೀಡುತ್ತಿವೆ.
ನಮ್ಮ ಜಿಲ್ಲೆಯ ಕಂಪನ್ನು ತಮ್ಮ ಸಾಹಿತ್ಯದ ಮೂಲಕ ಎಲ್ಲೆಡೆ ಪಸರಿಸಿ ನಾಡಿಗೆ ಕೀರ್ತಿತಂದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹಾಗೂ ಮುಂಬೈನ ಅನಿತಾ ಪಿ. ತಾಕೊಡೆ ಅವರಿಗೆ ನಮ್ಮೂರ ಧ್ವನಿ ಸುದ್ಧಿ ಮಾಹಿನಿಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 95905 51177