ಮಂಗಳೂರು: ಸೋಮೇಶ್ವರದಲ್ಲಿರುವ ಸೋಮನಾಥ ದೇವಸ್ಥಾನದ ಲಕ್ಷದೀಪೋತ್ಸವದ ಸಂದರ್ಭದಲ್ಲಿ ಶಿವಭಕ್ತ ವೃಂದ ಮತ್ತು ಸೋಮನಾಥ ಭಜನಾಮಂಡಳಿಗಳ ಆಶ್ರಯದಲ್ಲಿ ನಡೆದ ಗೂಡುದೀಪ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಂಗಳೂರಿನ ಕಣಚೂರು ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಹಾಗೂ ಮಂಗಳಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ಮೂಲವ್ಯಾಧಿ ಕ್ಷಾರ ತಜ್ಞ ಮತ್ತು ಬರಹಗಾರ ಡಾ ಸುರೇಶ ನೆಗಳಗುಳಿಯವರು ದೀಪ ಬೇಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡುತ್ತಾ ಧರ್ಮ ಜಾಗೃತಿಯ ಕುರಿತಾದ ಸ್ವರಚಿತ ಮುಕ್ತಕ ಮಾಲೆ ವಾಚನಮಾಡಿ ಧಾರ್ಮಿಕ ಆಚರಣೆಗಳು ಸಾತ್ವಿಕತೆಯ ಮೂಲಗಳಾಗಿದ್ದು ಜನ ಸಂಕುಲದ ಒಗ್ಗೂಡುವಿಕೆಗೆ ಕಾರಣವಾಗುತ್ತವೆ ಮತ್ತು ಎಲ್ಲಾ ಧರ್ಮಗಳ ಹಬ್ಬಗಳದ್ದೂ ಮೂಲ ಉದ್ದೇಶ ಒಂದೇ ಆಗಿದೆ . ಸಕಲರ ಪಾಲ್ಗೊಳ್ಳುವಿಕೆ ವಿಶ್ವ ಶಾಂತಿಯ ಸಂಕೇತ ಎಂದರು.
ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಅಧ್ಯಕ್ಷರಾದ ಶ್ರೀ ಸುರೇಶ್ ಭಟ್ನಗರ,ಶ್ರೀ ಸೋಮನಾಥ ದೇವಸ್ಥಾನದ ಅಧ್ಯಕ್ಷ ಶ್ರೀ ಬಿ.ರವೀಂದ್ರ ನಾಥವರೈ,ಮಂಗಳಾದೇವಿ ಸೇವಾಸಮಿತಿ ಅಧ್ಯಕ್ಷ ಶ್ರೀ ದಿಲ್ ರಾಜ್ ಆಳ್ವ,ಪಂಚಮಿ ಗ್ಯಾಸ್ ಏಜೆನ್ಸಿಯ ಮಾಲಕ ಶ್ರೀ ಪ್ರಶಾಂತ್ ಕುಮಾರ್, ಸಂತೋಷ್ ಕುಮಾರ್ ಬೊಳಿಯಾರ್, ಪ್ರವೀಣ್ ಸೋಮೇಶ್ವರ ಹಾಗೂ ಓಜಾಸ್ ಟ್ರಸ್ಟ್ ನ ಶ್ರೀಮತಿ ದಿನಮಣಿ ರಾವ್ ಹಬ್ಬಗಳ ಔಚಿತ್ಯಗಳನ್ನು ಸಮಯೋಚಿತವಾಗಿ ವರ್ಣಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಧರ್ಮಶಿಕ್ಷಣ ಕೇಂದ್ರದ ಪ್ರಧಾನ ಸಂಚಾಲಕರಾದ ಡಾ. ಅರುಣ ಉಳ್ಳಾಲ್ ರವರು ವ್ರತ, ಹಬ್ಬ, ಉತ್ಸವಗಳ ವ್ಯಾಖ್ಯೆ ಮಾಡುತ್ತಾ ಲಕ್ಷದೀಪದ ಬೆಳಕು ಹರಡಿ ಜನರ ಬಾಳಿಗೆ ಹೊಸ ಬೆಳಕು ಬರುವ ಸಂಕೇತವಾಗಿ ಭಾವಿಸುವ ಇಂತಹ ಸಮಾರಂಭಗಳು ಧರ್ಮಪೂರಕ ಎಂದರು.
ಬಳಿಕ ಸಾಧಕ ಸನ್ಮಾನ, ಪ್ರತಿಭಾನ್ವಿತ ಕಲಾವಿದರಿಂದ ಹಾಗೂ ಮಹಿಳೆಯರಿಂದ ಭರತ ನಾಟ್ಯ ಕಾರ್ಯಕ್ರಮಗಳೂ , ಗೂಡುದೀಪ ಮತ್ತಿತರ ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆಗಳೂ ನಡೆದವು
ಈ ಕಾರ್ಯಕ್ರಮದಲ್ಲಿ ಪುಷ್ಪಾ, ಕಲಾಸೃಷ್ಟಿ ಬಳಗದ ಸಂಚಾಲಕಿ ಮುಬೀನಾ ಪರವೀನ್,ಶಮಾ ಪರವೀನ್ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.