ಈದ್ ಮೆರವಣಿಗೆ ಮುಂದೂಡಿಕೆ 16ರ ಬದಲು ಸೆ.22ಕ್ಕೆ
ನಗರದಲ್ಲಿ ಸೆ.16ರಂದು ನಡೆಯಬೇಕಿದ್ದ ಈದ್ ಮಿಲಾದ್ ಮೆರವಣಿಗೆಯನ್ನು ಗಣೇಶೋತ್ಸವ ಹಿನ್ನೆಲೆಯಲ್ಲಿ ಸೆ.22ಕ್ಕೆ ಮುಂದೂಡಲಾಯಿತು.ಈ ಸಂಬಂಧ ನಗರದಲ್ಲಿ ಶುಕ್ರವಾರ ಸಭೆ ಸೇರಿದ್ದ ಮುಸ್ಲಿಂ ಸಮಾಜದ ಹಿರಿಯರು, ವಿವಿಧ ಕಮಿಟಿಗಳ ಪದಾಧಿಕಾರಿಗಳು ಹಾಗೂ ಧರ್ಮಗುರುಗಳು ಒಮ್ಮತದ ನಿರ್ಣಯ ಕೈಗೊಂಡರು.
‘ಕ್ಯಾಲೆಂಡರ್ ಪ್ರಕಾರ ಈದ್ ಮಿಲಾದ್ ಮೆರವಣಿಗೆ ಸೆ.16ಕ್ಕೆ, ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸೆ.17ಕ್ಕೆ ನಡೆಯಬೇಕಿದೆ. ಆದರೆ, ಬೆಳಗಾವಿಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಬಹಳ ಅದ್ಧೂರಿಯಾಗಿ ನಡೆಯಲಿದೆ.
ಆ ಹಬ್ಬಕ್ಕೆ ತೊಡಕಾಗಬಾರದು, ಉತ್ಸವ ಸುಸೂತ್ರವಾಗಿ ನಡೆಯಬೇಕು, ಶಾಂತಿ- ಸಹಬಾಳ್ವೆ ಕಾಪಾಡಲು ಅನುಕೂಲ ಆಗಬೇಕು ಎಂಬ ಉದ್ದೇಶದಿಂದ ಈದ್ ಮೆರವಣಿಗೆ ಮುಂದೂಡಲಾಗಿದೆ’ ಎಂದು ಹಿರಿಯರು ತಿಳಿಸಿದರು.
‘ಸೆ.16ರಂದು ಪದ್ಧತಿ ಪ್ರಕಾರ ಎಲ್ಲ ಮಸೀದಿ ಹಾಗೂ ಮನೆಗಳಲ್ಲಿ ಈದ್ ಆಚರಣೆಗಳು ನಡೆಯಲಿವೆ. ಮೆರವಣಿಗೆ ಮಾತ್ರ ಮುಂದೂಡಲಾಗಿದೆ’ ಎಂದು ಶಾಸಕ ಆಸಿಫ್ ಸೇರ್ ತಿಳಿಸಿದರು.ಇಸ್ಲಾಂ ಧರ್ಮಗುರುಗಳಾದ ಮುಫ್ಟಿ ಮಂಜೂರ್ ಅಹ್ಮದ್ ರಿಜ್ಜಿ, ಹಫೀಜ್ ನಜೀರುಲ್ಲಾ ಖಾದ್ರಿ, ಸರ್ದಾರ್ ಅಹ್ಮದ್, ಮುಸ್ತಾಕ್ ನಯೀಮ್ ಅಹ್ಮದ್ ಇತರರಿದ್ದರು.