ರಾಮದುರ್ಗ: ಪ್ರಧಾನ ಮಂತ್ರಿ ಮುಫ್ತ ಬಿಜಲೀ ಯೋಜನೆಯಡಿಯಲ್ಲಿ ಸೌರ ವಿದ್ಯುಚ್ಛಕ್ತಿ ಉತ್ಪಾದನೆಯಿಂದ ಮನೆಗಳ ಸಬಲೀಕರಣ ಕಾರ್ಯಕ್ರಮದ ಅಂಗವಾಗಿ ಕೈಗಾರಿಕಾ ತರಬೇತಿ ಕೇಂದ್ರಗಳ ಮೂಲಕ ನೀಡಲಾಗುವ ತರಬೇತಿ ಹಾಗೂ ಆನ್ ಜಾಬ್ ಟ್ರೇನಿಂಗ್ (ಓಜೆಟಿ) ಹಾಗೂ ಪ್ರಮಾಣೀಕರಣದ ವಿಶಿಷ್ಠ ಕಾರ್ಯಕ್ರಮವು ರಾಮದುರ್ಗದ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಯಶಸ್ವಿಗೊಂಡಿತು.
ಓಜೆಟಿ ತರಬೇತಿಯನ್ನು ಮಾಸ್ಟರ್ ತರಬೇತಿದಾರ ಭಾಲಚಂದ್ರ ಜಾಬಶೆಟ್ಟಿಯವರು ನೀಡಿದರು. ಪ್ರಧಾನ ಮಂತ್ರಿ ಮುಫ್ತ ಬಿಜಲೀ ಯೋಜನೆಯಿಂದ ಸಾಮಾನ್ಯ ಗ್ರಾಹಕರಿಗೆ ದೊರೆಯುವ ಸಬ್ಸಿಡಿ ಹಾಗೂ ಇತರೆ ಸೌಲಭ್ಯಗಳ ಕುರಿತು ವಿವರಿಸಿದರು.
ಸೌರ ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಾಗುತ್ತಿರುವ ನೂತನ ಆವಿಷ್ಕಾರಗಳಿಂದ ಏರುತ್ತಿರುವ ಜಾಗತಿಕ ತಾಪಮಾನದಿಂದಾಗುವ ಹಾನಿ ತಪ್ಪಿಸಬಹುದಾಗಿದೆಯೆಂದು ಹಾಗೂ ಇಂಧನ ಸ್ವಾವಲಂಬಿಯಾಗಲು ಸಾಧ್ಯವೆಂದು ಜಾಬಶೆಟ್ಟಿಯವರು ಅಭಿಪ್ರಾಯಪಟ್ಟರು.
ತರಬೇತಿಯ ಇನ್ನೊಂದು ಮಹತ್ವದ ಘಟ್ಟವಾದ ಸೌರ ವಿದ್ಯುಚ್ಛಕ್ತಿ ಉತ್ಪಾದನಾ ಘಟಕಕ್ಕೆ ನೀಡುವ ಕ್ಷೇತ್ರಭೇಟಿಯಾಗಿದ್ದು, ಅಲ್ಲಿ ಪ್ರಶಿಕ್ಷಣಾರ್ಥಿಗಳು ತಮ್ಮ ಕೈಯಾರೆ ಕೆಲಸ ಮಾಡಿ ಕೌಶಲ್ಯಾಭಿವೃದ್ಧಿ ಹೊಂದುವದು ಈ ತರಬೇತಿಯ ವೈಶಿಷ್ಠತೆಗಳಲ್ಲೊಂದಾಗಿದೆ.
ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಮುಲ್ಲಾರವರು ಅಧ್ಯಕ್ಷತೆ ವಹಿಸಿದ್ದರು, ತರಬೇತಿದಾರ ಯಲಗೋಡರವರು ಕಾರ್ಯಕ್ರಮ ನಿರೂಪಿಸಿದರು.
ಸದರೀ ತರಬೇತಿಯ ಮುಖ್ಯ ತರಬೇತುದಾರ ಸೌಂದತ್ತಿಯ ಸರಕಾರಿ ಔದ್ಯೋಗಿಕ ತರಬೇತಿ ಕೇಂದ್ರದ ಕಿರಣ ಉಜ್ಜನಕೊಪ್ಪರವರು ಉಪಸ್ಥಿತರಿದ್ದರು.