ಹುಕ್ಕೇರಿ: ಹಿಡಕಲ್ ಜಲಾಶಯ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡಿರುವ ರೈತರಿಗೆ ಪರಹಾರ ನೀಡಲು ಹಾಗೂ ಜಮೀನುಗಳ ಉತಾರ ನೀಡುತ್ತಿಲ್ಲ. ಈಗಿನ ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್ ಗಳು 5 ಲಕ್ಷ ರೂ. ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿ ಬುಧವಾರ ರೈತರು ಕರ್ನಾಟಕ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಅಹೋರಾತ್ರಿ ಪ್ರತಿಭಟನೆ ನಡೆಸಿದರು.
ಈಗಾಗಲೇ ತಾಲೂಕಿನ ಮಾಸ್ತಿಹೊಳಿ, ಗುಡನಟ್ಟಿ,ಬೀರಹೊಳ್ಳಿ, ನರಸಿಂಗಪುರ, ಗ್ರಾಮದ ರೈತರು ಹಲವಾರು ಬಾರಿ ಹೋರಾಟ ಮಾಡಿದರೂ ನೀರಾವರಿ ಇಲಾಖೆ ಪರಿಹಾರ ನೀಡಲು ಹಿಂದೇಟು ಹಾಕುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೇರಿ ಎಲ್ಲ ಶಾಸಕರು, ಸಂಸದರು ಸೂಚನೆ ಕೊಟ್ಟರು, ಅಧಿಕಾರಿಗಳು ಪರಿಹಾರ ನೀಡುತ್ತಿಲ್ಲ. ಕುಂಟುನೆಪ ಹೇಳಿಕೊಂಡು ದಿನ ಕಳೆಯುತ್ತಿದ್ದಾರೆ. ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಅವರು ಕೇಳಿದಷ್ಟು ಹಣ ನೀಡಿದರೆ 24 ಗಂಟೆಯಲ್ಲಿಯೇ ಉತಾರ ಸೇರಿ ಎಲ್ಲ ದಾಖಲೆಗಳನ್ನು ನೀಡುತ್ತಾರೆ ಎಂದು ದೂರಿದರು.
ಕಳೆದ ಎರಡು ವರ್ಷಗಳಿಂದೆ 400 ಎಕರೆ ಜಮೀನಿಗೆ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಆದರೆ, ಇಲ್ಲಿಯವರೆಗೆ ಪರಿಹಾರ ನೀಡಿಲ್ಲ. ಪರಿಹಾರ ನೀಡದೆ ಕೃಷಿ ಜಮೀನುಗಳ ಉತಾರಗಲ್ಲಿ ನೀರಾವರಿ ನಿಗಮ ಹೆಸರು ಸೇರ್ಪಡೆ ಮಾಡಿದ್ದಾರೆ. ಇದರಿಂದಾಗಿ ರೈತರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯಗಳು ಸಿಗುತ್ತಿಲ್ಲ.
ಇದೀಗ ಜಮೀನುಗಳಿಗೆ ಹೊಸ ಉತಾರಗಳನ್ನು ನೀಡುತ್ತಿಲ್ಲ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರಕ್ಕಿಂತ ಅಧಿಕಾರಿಗಳು ಹೆಚ್ಚಿನ ಬೇಡಿಕೆಯಿಟ್ಟಿದ್ದಾರೆ. ಸಣ್ಣ ರೈತರು ಎಲ್ಲಿಂದ ಅಷ್ಟೊಂದು ಹಣ ತರಬೇಕು. ಒಂದು ತಿಂಗಳುವರೆಗೆ ನಾವು ಇವರಿಗೆ ಅವಕಾಶ ನೀಡುತ್ತೇವೆ ಒಂದು ವೇಳೆ ಒಂದು ತಿಂಗಳವರೆಗೆ ನಮ್ಮ ಸಮಸ್ಯೆಗೆ ಸ್ಪಂದನೆ ಸಿಗದೇ ಇದ್ದರೆ ನಾವು ಮತ್ತೆ ಉಗ್ರ ಹೋರಾಟ ಮಾಡುತ್ತೇವೆ ಎಂದ ರೈತ ಮುಖಂಡ ಬಾಳೇಶ್ ಮಾವನೂರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸೇರಿ ಕೆಲ ಹಿರಿಯ ಅಧಿಕಾರಿಗಳು ರೈತರಿಗೆ ಉತಾರ, ಪರಿಹಾರ ನೀಡಿದರೆ ಬಡ್ತಿ ಕೈತಪ್ಪುತ್ತದೆ ಎಂದು ಪರಿಹಾರ ತಡೆ ಹಿಡಿದಿದ್ದಾರೆ. ಅಲ್ಲದೆ, ಹೊಸದಾಗಿ ಉತಾರಗಳನ್ನು ನೀಡುವುದು ಕೂಡ ಬಂದ್ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಗೆ ಗೌರವ ಕೊಡುತ್ತಿಲ್ಲ ಎಂದು ರೈತರಾದ ಸಂತೋಷ ಪಾಟೀಲ್ ದೂರಿದ್ದಾರೆ.