ಬೆಳಗಾವಿ: ಇಂದಿನ ಆಧುನಿಕ ವೈಜ್ಞಾನಿಕ ಯುಗದಲ್ಲೂ ಅನೇಕ ರಾಷ್ಟ್ರಗಳಲ್ಲಿ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಇಲ್ಲ. ಬಾಲ್ಯದಲ್ಲಿ ತಂದೆ, ತಾಯಿ, ಯೌವ್ವನದಲ್ಲಿ ಗಂಡನ ಹಾಗೂ ಮುಪ್ಪಾವಸ್ಥೆಯಲ್ಲಿ ಮಕ್ಕಳ ಆಶ್ರಯದಲ್ಲಿ ಹೆಣ್ಣು ಇರುವುದರಿಂದ ಅವಳು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂಬ ಭಾವ ಸಮಾಜದಲ್ಲಿತ್ತು. ಆದರೆ ಇವೆಲ್ಲವನ್ನೂ ತಿರಸ್ಕರಿಸಿ ಹೆಣ್ಣುಮಕ್ಕಳಗೆ ಮೊಟ್ಟಮೊದಲ ಬಾರಿಗೆ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಜಗತ್ತಿಗೆ ಪ್ರಜಾಸತ್ತಾತ್ಮಕ ಮೌಲ್ಯವನ್ನು ಬೋಧಿಸಿದವರು ಬಸವಣ್ಣ ಎಂದು ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಜಾಗತಿಕ ಲಿಂಗಾಯತ ಮಹಾಸಭೆಯ ವತಿಯಿಂದ ನಾಗನೂರು ರುದ್ರಾಕ್ಷಿ ಮಠದ ಪ್ರಭುದೇವ ಸಭಾಗೃಹ ದಲ್ಲಿ ಹಮ್ಮಿಕೊಂಡ ಬಸವ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಂದುವರಿದು ಮಾತನಾಡಿದ ಶ್ರೀಗಳು ಬಸವಣ್ಣನವರು ನೀಡಿದ ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ಯಾವುದೇ ರಾಷ್ಟ್ರ ಎಂದೂ ಬಡವಾಗುವುದಿಲ್ಲ ಬದಲಿಗೆ ಅದು ಸದಾ ಸಂಪದ್ಭರಿತ ವಾಗುತ್ತದೆ. ನಾನು ಎಂಬ ಅಹಂ ಭಾವ ಅಳಿದರೆ ಸಮಾಜದಲ್ಲಿ ಸಂಘರ್ಷ ಕಡಿಮೆಯಾಗುತ್ತದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಪ್ರವಚನ ನೀಡಿದ ಕುಲವಳ್ಳಿ ಸುಕುಮಾರ ಯೋಗಾಶ್ರಮದ ಮಲ್ಲಿಕಾರ್ಜುನ ದೇವರು ಮಾತನಾಡಿ, ದೇಶದಲ್ಲಿ ಕೋಟ್ಯಾಂತರ ದೇವಾಲಯಗಳು, ಲಕ್ಷಾಂತರ ಧಾರ್ಮಿಕ ಮುಖಂಡರಿದ್ದರೂ ಸಹ ಸಮಾಜದಲ್ಲಿ ಕೊಲೆ, ಅನ್ಯಾಯ, ಅನಾಚಾರ ನಿಂತಿಲ್ಲ. ತಲೆಯಲ್ಲಿ ಹೊಟ್ಟಾದರೆ ಶಾಂಪೂ ಬಳಸಿ ಸ್ವಚ್ಚಗೊಳಿಸಬಹುದು. ಬಟ್ಟೆ ಹೊಲಸಾದರೆ ಮಡಿವಾಳರಿಗೆ ನೀಡಬಹುದು. ಆದರೆ ಮನಸ್ಸಿನ ಮೈಲಿಗೆಯನ್ನು ತೊಳೆಯಬೇಕಾದರೆ ಶರಣರ ಮಹಾತ್ಮರ ವಾಣಿಯನ್ನು ಆಲಿಸುತ್ತಾ ಅವುಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಗಡಹಿಂಗ್ಲಜ ಜಡೆಸಿದ್ದೇಶ್ವರ ಬಿಲ್ವಾಶ್ರಮದ ಶ್ರೀ ಮಹಾಂತ ಸಿದ್ದೇಶ್ವರ ಸ್ವಾಮಿಗಳು, ಎತ್ತುಗಳನ್ನು ಪೂಜಿಸುವುದು ಬಸವ ಜಯಂತಿಯಲ್ಲ ಬದಲಿಗೆ ಬಿದ್ದವರನ್ನು ಎತ್ತುವುದು ಬಸವ ಜಯಂತಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಬಸವ ಜಯಂತಿಯ ಸಂದರ್ಭಲ್ಲಿ ರೇಣುಕಾಚಾರ್ಯ ಜಯಂತಿ ಆಚರಿಸುವಂತೆ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೊರಡಿಸಿದ್ದ ಆದೇಶವನ್ನು ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ರದ್ದುಪಡಿಸಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
ಅನುಶರಣ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷೆ ಅನ್ನಪೂರ್ಣ ಅಗಡಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ಡಾ. ರೋಹಿಣಿ ಕರ್ಜಗಿಮಠ ಹಾಗು ನಯನಾ ಗಿರಿಗೌಡರ ಪ್ರಾರ್ಥಿಸಿದರು. ಜಾಗತಿಕ ಲಿಂಗಾಯತ ಮಹಾಸಭೆಯ ನಗರ ಘಟಕದ ಕಾರ್ಯದರ್ಶಿ ಸಿ.ಎಮ್. ಬೂದಿಹಾಳ ಸ್ವಾಗತಿಸಿದರು. ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರಾದ ಎ.ಕೆ.ಪಾಟೀಲ, ಮಂಜುನಾಥ ಶರಣಪ್ಪನವರ ನಿರೂಪಿಸಿದರು. ಕೊನೆಗೆ ಶರಣೆ ರತ್ನಾ ಬೆಣಚಿನಮರಡಿ ವಂದಿಸಿದರು.