ಬೆಳಗಾವಿ: ನಗರದ ಬಸವಂತಯ್ಯ ಚಿನ್ನಮ್ಮ ಹಿರೇಮಠ ಅವರ ಶ್ರೀ ನಾಗನೂರು ಸ್ವಾಮಿಗಳ ವೃದ್ಧಾಶ್ರಮಕ್ಕೆ ವಿದೇಶಿ ನವದಂಪತಿಗಳಾದ ಅನಿರವನ ಶುಕ್ಲಾ ಹಾಗೂ ಕೆರೋಲಿನ್ ಶುಕ್ಲಾ ಭೇಟಿ ನೀಡಿ, ವೃದ್ಧಾಶ್ರಮದ ವಯೋವೃದ್ಧರೊಂದಿಗೆ ತಮ್ಮ ವಿವಾಹದ ಸಂತಸವನ್ನು ಸರಳವಾಗಿ ಆಚರಿಸಿಕೊಂಡರು.
ನಮ್ಮ ಭಾರತೀಯರು ಸಂಸ್ಕೃತಿಯ ಪ್ರಕಾರ ತಂದೆ ತಾಯಿಯರನ್ನು ಗೌರವ ನೀಡಿ ಪೂಜೆ ಮಾಡುತ್ತಾರೆ. ಆದರೆ ಈಗಿನ ಸಂದರ್ಭದಲ್ಲಿ ಕೆಲವು ಮಕ್ಕಳು ಉನ್ನತ ಹುದ್ದೆಯಲ್ಲಿ ಇದ್ದರೂ ತಂದೆ ತಾಯಿಯರನ್ನು ವೃದ್ರಾಶ್ರಮದಲ್ಲಿ ಬಿಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಮೆರಿಕದಿಂದ ನಮ್ಮ ಬೆಳಗಾವಿಯ ವೃದ್ಧಾಶ್ರಮಕ್ಕೆ ಬಂದು ತಮ್ಮ ವಿವಾಹದ ಸಂತಸವನ್ನ ವಯೋವೃದ್ಧರೊಂದಿಗೆ ಈ ಸತಿ-ಪತಿ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅನಿರವನ ಶುಕ್ಲಾ ಅವರು ನಾನು ಹಾಗೂ ನಮ್ಮ ಕುಟುಂಬದವರು ಭಾರತೀಯ ಮೂಲವಾದರೂ, ಸದ್ಯ ಅಮೆರಿಕಾದಲ್ಲಿ ನೆಲೆಸಿದ್ದೇವೆ. ಸದ್ಯ ನಾನು ಅಮೇರಿಕಾದ ಯುವತಿ ಕೆರೋಲಿನ್ ಜೊತೆಗೆ ವಿವಾಹವಾಗಿದ್ದೇನೆ. ಆದರೆ, ಇಂದು ನಿಮ್ಮ ಜೊತೆ ಈ ನನ್ನ ಸಂತೋಷದ ಕ್ಷಣವನ್ನು ಹಂಚಿಕೊಳ್ಳುತ್ತಿರುವುದು ನಮ್ಮಿಬ್ಬರಿಗೂ ತುಂಬಾ ಖುಷಿ ತಂದಿದೆ ಎಂದರು.
ಅನಂತರ, ಕೆರೋಲಿನ್ ಶುಕ್ಲಾ ಅವರು ಮಾತನಾಡಿ, ಇದು ಭಾರತಕ್ಕೆ ನನ್ನ ಮೊದಲ ಭೇಟಿ. ಆದರೆ, ಇಲ್ಲಿನ ಜನರ ಸ್ವಾಗತದಿಂದ ನನ್ನ ಮನ ತುಂಬಿ ಹೋಗಿದೆ. ವರ್ಷಕ್ಕೆ ಒಮ್ಮೆಯಾದರೂ ನಾನು ಇಲ್ಲಿ ಬಂದು ಹೋಗಲು ನಿಮ್ಮೆಲ್ಲರ ಜೊತೆ ಕಾಲ ಕಳೆಯಲು ಇಷ್ಟ ಪಡುತ್ತೇನೆ ಎಂದರು.
ನಂತರ, ವಿದೇಶಿ ನವ ಜೋಡಿ ಫಲಾನುಭವಿಗಳಿಗೆ ಬೆಡ್ಶೀಟ್, ಮಚ್ಚರದಾಣಿ, ದಿನ ಬಳಕೆಗೆ ಸೋಪು ಹಾಗೂ ಊಟ ವಿತರಿಸಿ ಅವರ ಆಶೀರ್ವಾದ ಪಡೆದುಕೊಂಡು ಖುಷಿ ಪಟ್ಟರು.
ಈ ಸಂದರ್ಭದಲ್ಲಿ, ಅನಿರವನ ಶುಕ್ಲಾ ಹಾಗೂ ಕೆರೋಲಿನ್ ಶುಕ್ಲಾ ದಂಪತಿಗಳು, ಶಂಕರ ಶುಕ್ಲಾ ಹಾಗೂ ದುರ್ಗಾ ಶುಕ್ಲಾ ದಂಪತಿಗಳು (ತಂದೆ-ತಾಯಿ), ಮಹಿಳಾ ಕಲ್ಯಾಣ ಸಂಸ್ಥೆಯ ಸಂಯೋಜಕರಾದ ಶ್ರೀಮತಿ ಸುರೇಖಾ ಪಾಟೀಲ್, ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ರೇಡಿಯೋ ನಿರೂಪಕರಾದ ಆರ್.ಜೆ ಚೇತನ, ಜಾನಕಿ, ಅಲಾಭಕ್ಷ ಹಾಗೂ ವೃದ್ಧಾಶ್ರಮದ ಫಲಾನುಭವಿಗಳು ಉಪಸ್ಥಿತರಿದ್ದರು.