ಬೆಳಗಾವಿ: ಗೋವಾದಿಂದ ನವದೆಹಲಿಗೆ ತೆರಳುತ್ತಿದ್ದ ವಿಮಾನ ಪ್ರಯಾಣದ ವೇಳೆ ಸಾವು–ಬದುಕಿನ ನಡುವೆ ಹೋರಾಡುತ್ತಿದ್ದ ವಿದೇಶಿ ಯುವತಿಯ ಪ್ರಾಣವನ್ನು ಉಳಿಸುವ ಮೂಲಕ ಖಾನಾಪುರದ ಮಾಜಿ ಶಾಸಕಿ ಹಾಗೂ ವೃತ್ತಿಪರ ವೈದ್ಯೆಯಾದ ಡಾ. ಅಂಜಲಿ ನಿಂಬಾಳ್ಕರ್ ಮಾನವೀಯತೆ ಮತ್ತು ಕರ್ತವ್ಯನಿಷ್ಠೆಯ ಅಪೂರ್ವ ಮಾದರಿಯಾಗಿದ್ದಾರೆ.
ವಿಮಾನ ಟೇಕ್‌ಆಫ್ ಆದ ಕೆಲವೇ ಸಮಯದಲ್ಲಿ ಅಮೆರಿಕ ಮೂಲದ ಯುವತಿಗೆ ತೀವ್ರ ನಡುಕ ಕಾಣಿಸಿಕೊಂಡು, ಆಕೆ ಅಚೇತನವಾಗಿ ಕುಸಿದುಬಿದ್ದಳು. ಈ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಗಾಬರಿಗೊಂಡರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಡಾ. ಅಂಜಲಿ ನಿಂಬಾಳ್ಕರ್ ತಕ್ಷಣ ಯುವತಿಯ ನೆರವಿಗೆ ಧಾವಿಸಿದರು. ಯುವತಿಗೆ ನಾಡಿಮಿಡಿತವೂ ಸಿಗದ ಸ್ಥಿತಿಯಲ್ಲಿ ಆರೋಗ್ಯ ತೀವ್ರವಾಗಿದ್ದನ್ನು ಗಮನಿಸಿದ ಅವರು, ತಮ್ಮ ವೈದ್ಯಕೀಯ ಅನುಭವವನ್ನು ಬಳಸಿಕೊಂಡು ಕೂಡಲೇ ಕಾರ್ಡಿಯೋ–ಪಲ್ಮನರಿ ರಿಸಸ್ಸಿಟೇಷನ್ (ಸಿಪಿಆರ್) ಚಿಕಿತ್ಸೆ ಆರಂಭಿಸಿದರು. ಅವರ ನಿರಂತರ ಪ್ರಯತ್ನದಿಂದ ಯುವತಿಯ ಉಸಿರಾಟ ಮರುಕಳಿಸಿತು.
ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಂತೆ ಕಂಡ ಯುವತಿ ಸುಮಾರು ಅರ್ಧ ಗಂಟೆಯ ನಂತರ ಮತ್ತೆ ಅಚೇತನಗೊಂಡಾಗ, ವಿಮಾನದಲ್ಲಿದ್ದವರ ಆತಂಕ ಮತ್ತಷ್ಟು ಹೆಚ್ಚಾಯಿತು. ಈ ಸಂದರ್ಭದಲ್ಲೂ ಡಾ. ಅಂಜಲಿ ಅವರು ಮತ್ತೊಮ್ಮೆ ತುರ್ತು ಚಿಕಿತ್ಸೆ ನೀಡಿ ಯುವತಿಯ ಪ್ರಾಣವನ್ನು ರಕ್ಷಿಸಿದರು. ಅಲ್ಲದೆ, ದೆಹಲಿಗೆ ವಿಮಾನ ತಲುಪುವವರೆಗೂ ಯುವತಿಯ ಪಕ್ಕದಲ್ಲೇ ನಿಂತು ಆರೋಗ್ಯದ ಮೇಲೆ ನಿಕಟ ನಿಗಾ ವಹಿಸಿದರು.
ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗುವ ಮುನ್ನವೇ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿ, ವಿಮಾನ ನಿಲ್ದಾಣ ತಲುಪಿದ ತಕ್ಷಣ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸುವ ಕಾರ್ಯವನ್ನು ಖುದ್ದಾಗಿ ನೋಡಿಕೊಂಡರು.
ಡಾ. ಅಂಜಲಿ ನಿಂಬಾಳ್ಕರ್ ಅವರ ಸಮಯೋಚಿತ ಹಾಗೂ ಧೈರ್ಯಶಾಲಿ ಕಾರ್ಯವನ್ನು ವಿಮಾನದ ಪೈಲಟ್ ಮತ್ತು ಸಿಬ್ಬಂದಿ ಮುಕ್ತಕಂಠದಿಂದ ಶ್ಲಾಘಿಸಿದ್ದು, ಈ ಘಟನೆಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143





















