ಬೆಳಗಾವಿ: ವಿಶ್ವದಲ್ಲಿ ಅನೇಕ ಆಕಾಶ ಕಾಯಗಳಿದ್ದರೂ ಜೀವರಾಶಿಗಳು ವಾಸಿಸಲು ಯೋಗ್ಯವಾದ ವಾತಾವರಣ ಹೊಂದಿರುವ ಗ್ರಹ ಭೂಮಿ ಮಾತ್ರ. ಭೂಮಿಯ ಮೇಲೆ ಜೀವರಾಶಿಗಳ ಅಸ್ತಿತ್ವ ಉಳಿಯಲು ಮೂಲ ಕಾರಣವೇ ಇಲ್ಲಿನ ಪರಿಸರ. ಇಂತಹ ಪರಿಸರವನ್ನು ನಾವು ನಮ್ಮ ಸ್ವಾರ್ಥಕ್ಕಾಗಿ ಮಲಿನಗೊಳಿಸದೆ ಅದನ್ನು ಸಂರಕ್ಷಿಸಬೇಕು. ಏಕೆಂದರೆ ಅದು ಜೀವಸಂಕುಲಗಳ ಅಸ್ತಿತ್ವದ ಅಡಿಪಾಯ ಎಂದು ಮಾಳ ಮಾರುತಿ ಪೊಲೀಸ್ ಠಾಣೆಯ ಸಿಪಿಐ ಜೆ.ಎಮ್. ಖಾಲಿಮಿರ್ಚಿ ಅಭಿಪ್ರಾಯಪಟ್ಟರು. ಅವರು ಇಂದು ಶಿವಬಸವ ನಗರದ ಸಿದ್ಧರಾಮೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ “ಸಸಿ ನೆಡುವ ಹಾಗೂ ಅಪರಾಧ ಜಾಗೃತಿ ಕಾರ್ಯಕ್ರಮ” ಉದ್ದೇಶಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಮಾನವ ಹೊರತು ಪಡಿಸಿ ಯಾವ ಜೀವರಾಶಿಗಳಿಂದಲೂ ಪರಿಸರ ಮಾಲಿನ್ಯವಾಗುತ್ತಿಲ್ಲ. ಆದರೆ ಬುದ್ದಿವಂತ ಮಾನವನಿಂದ ಮಾತ್ರ ನಿರಂತರ ಶೋಷಣೆ ನಡೆಯುತ್ತಿದೆ. ವಿದ್ಯಾರ್ಥಿಗಳು ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು ಸೇರಿದಂತೆ ಪರಿಸರ ಸುಸ್ಥಿರತೆಯತ್ತ ಬಾಲ್ಯದಿಂದಲೇ ಗಮನಹರಿಸಬೇಕು ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಎ.ಸಿ.ಪಿ. ಸೋಮೇಗೌಡ ಹಿಂದೆ ‘ಚಡಿ ಚಮ್ ಚಮ್ ವಿದ್ಯಾ ಗಮ್ ಗಮ್’ ಎಂಬಂತೆ ಶಿಕ್ಷಕರಿಂದ ಪೆಟ್ಟು ತಿಂದು ವಿದ್ಯಾರ್ಥಿಗಳು ಉತ್ತಮ ಜ್ಞಾನಗಳಿಸಿ ಸಾಧಕರಾಗುತ್ತಿದ್ದರು. ಆದರೆ ಇಂದು ಶಾಲೆಯಲ್ಲಿ ಶಿಕ್ಷಕರ ಹಾಗೂ ಮನೆಯಲ್ಲಿ ಪೋಷಕರ ಭಯವಿಲ್ಲದ ಕಾರಣ ವಿದ್ಯಾರ್ಥಿಗಳು ಅಪರಾಧದತ್ತ ವಾಲುತ್ತಿರುವುದು ನೋವಿನ ಸಂಗತಿ ಎಂದರು.
ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ. ಬಿ. ಹಿರೇಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಸಿದ್ಧರಾಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಸಿದ್ಧರಾಮ ರೆಡ್ಡಿ, ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಶಿವಲೀಲಾ ಪೂಜಾರ, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಾಚಾರ್ಯ ಪ್ರೇಮಲತಾ ಪಾಟೀಲ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸಿದ್ಧರಾಮೇಶ್ವರ ಪ್ರೌಢಶಾಲೆಯ ಶಿಕ್ಷಕ ಮನೋಹರ ಉಳ್ಳೇಗಡ್ಡಿ ಸ್ವಾಗತಿಸಿ, ನಿರೂಪಿಸಿದರು. ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಏ.ಕೆ. ಪಾಟೀಲ ವಂದಿಸಿದರು.