ಬೈಲಹೊಂಗಲ : ತಾಲೂಕಿನ ಸಂಗೊಳ್ಳಿ ಗ್ರಾಮ ಪಂಚಾಯತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಪ್ರತಿಯೊಬ್ಬರೂ ಶಿಬಿರದ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಅಡಿವೆಪ್ಪ ತಳವಾರ ಅವರು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಬೆಳಗಾವಿ , ತಾಲ್ಲೂಕು ಪಂಚಾಯಿತಿ ಬೈಲಹೊಂಗಲ, ಗ್ರಾಪಂ ಸಂಗೊಳ್ಳಿ ಹಾಗೂ ಆರೋಗ್ಯ ಇಲಾಖೆ, ಸಹಯೋಗದಲ್ಲಿ ಗರಜುರ ಗ್ರಾಮದ ಹೊರ ವಲಯದಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಲುವೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಸೋಮವಾರ ಆಯೋಜಿಸಿದ್ದ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲಾ ಪಂಚಾಯಿತಿಯ ಮಾನ್ಯ ಶ್ರೀ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನಿರ್ದೇಶನ ಹಾಗೂ ತಾ.ಪಂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅವರ ಮಾರ್ಗದರ್ಶನ ದಂತೆ ಇಂದು ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಲಾಗಿದೆ.
ಪ್ರಸಕ್ತ ವರ್ಷ ಹೆಚ್ಚಿನ ಬಿಸಿಲು ಇದೆ. ಬಿಸಿಲಿನ ತಾಪಮಾನ ದಿಂದ ಕೂಲಿಕಾರರಿಗೆ ತಲೆ ಸುತ್ತು, ರಕ್ತದ ಒತ್ತಡ ಹೆಚ್ಚಳ ಹೀಗೆ ನಾನಾ ಅನಾರೋಗ್ಯದ ಸಮಸ್ಯೆಗಳು ಕಾಣಿಸಿ ಕೊಳ್ಳುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಳದಲ್ಲಿ ರಕ್ತದೊತ್ತಡ, ಶುಗರ್, ವಾಂತಿ, ಭೇದಿ ಪ್ರಕರಣದ ಬಗ್ಗೆ ತಪಾಸಣೆ ಮಾಡಲಾಗುತ್ತಿದೆ. ಎಲ್ಲಾ ಕೂಲಿಕಾರರು ತಪಾಸಣೆಗೆ ಒಳಗಾಗಿ ಶಿಬಿರದ ಪ್ರಯೋಜನ ಪಡೆದು ಕೊಳ್ಳುವಂತೆ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಧಿಕಾರಿಯಾದ ಸಂತೋಷ್ ಗಡದವರ ಅವರು ಮಾತನಾಡಿ, ಬಿಸಿಲಿನ ಸಂದರ್ಭದಲ್ಲಿ ಕೆಲಸ ಮಾಡುವುದರಿಂದ ಬಿಪಿ ಹೆಚ್ಚಾಗಿರುತ್ತದೆ. ಇದರಿಂದ ತಲೆ ಸುತ್ತು ಬಂದು ಬೀಳುವ ಸಾಧ್ಯತೆ ಇರುತ್ತದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ ಹೀಗಾಗಿ ತಂಬಾಕು ಸೇವನೆಯನ್ನು ಬಿಡಬೇಕು. ಶುದ್ಧ, ಕಾಯಿಸಿ ಆರಿಸಿದ ನೀರನ್ನು ಸೇವನೆ ಮಾಡಬೇಕು. ಕಲುಷಿತ ನೀರು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗ ಬೇಕಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜೀ ವಹಿಸಬೇಕು ಎಂದು ಹೇಳಿದರು.
ಶಿಬಿರದಲ್ಲಿ 250 ಜನ ಕೂಲಿಕಾರರ ಅರೋಗ್ಯ ತಪಾಸಣೆ ಮಾಡಲಾಯಿತು.ಗ್ರಾ ಪಂ ಕಾರ್ಯದರ್ಶಿ ಪ್ರಭು ನರಗಟ್ಟಿ,ಬೇರಪೂಟ್ ಟೆಕ್ನಿಷಿಯನ್ ಸಿದ್ದಪ್ಪ ಕಂಬಾರ, ಡೇಟಾ ಎಂಟ್ರಿ ಆಫರೇಟರ್ ಬಸನಗೌಡ ಪಾಟೀಲ್, ಗ್ರಾಮ ಕಾಯಕ ಮಿತ್ರ ಮಂಜುಳಾ ಹುಬ್ಬಳ್ಳಿ, ಸಿದ್ದಪ್ಪ ಗಣಾಚಾರಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಕೂಲಿಕಾರರು ಉಪಸ್ಥಿತರಿದ್ದರು.
ವರದಿ:ಕಲ್ಲಪ್ಪಾ ಪಾಮನಾಯಿಕ್