ಮಂಗಳೂರು: ಇಲ್ಲಿನ ಅಸೈಗೋಳಿಯಲ್ಲಿರುವ ಕರ್ನಾಟಕ ಏಳನೇ ಬೆಟಾಲಿಯನ್ ರಿಸರ್ವ್ ಪೋಲಿಸ್ ಘಟಕದ ಪೋಲೀಸ್ ವೃತ್ತಿಪರರಿಗೆ ಉಚಿತವಾಗಿ ದೇಹ ತಪಾಸಣೆ ಮತ್ತು ಚಿಕಿತ್ಸೆಗಳನ್ನು ನವೆಂಬರ್ 25, 2024 ರಂದು ಕಣಚೂರು ಆಯುರ್ವೇದ ಆಸ್ಪತ್ರೆಯ ವತಿಯಿಂದ ನೀಡಲಾಯಿತು.
ಬೆಟಾಲಿಯನ್ ನ ಮುಖ್ಯ ಅಧೀಕ್ಷಕ ಶ್ರೀ ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ಈ ಶಿಬಿರದ ವಿದ್ಯುಕ್ತ ಉದ್ಘಾಟನೆಯನ್ನು ಮಾಡಲಾಯಿತು. ಕಣಚೂರು ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ ಸುರೇಶ ನೆಗಳಗುಳಿ ಅವರು ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು.
ಅವರು ಮಾತನಾಡುತ್ತಾ ದೇಶ ಸೇವಕರಾದ ಪೋಲೀಸ್ ಅಧಿಕಾರಿಗಳು ಸದಾ ಸೇವಾ ತತ್ಪರರಾಗಿರುತ್ತಾರೆ.ಕಾಯಿಲೆಗಳು ಯಾರನ್ನೂ ಬಿಡಲಾರದು. ಕಾಯಿಲೆ ಬರದಂತೆ ನೋಡಿಕೊಳ್ಳುವುದೂ ಒಂದು ಅಗತ್ಯ ವಿಚಾರ. ಈ ನಿಟ್ಟಿನಲ್ಲಿ ಆಯುರ್ವೇದದ್ದು ಮಹತ್ವದ ಪಾತ್ರವಿದೆ. ಜನ ಸೇವಾ ತತ್ಪರರಾಗಿ ಹಾಜಿ ಡಾ . ಕಣಚೂರು ಮೋನು ಅವರು ಹುಟ್ಟು ಹಾಕಿದ ಆಯುರ್ವೇದ ಆಸ್ಪತ್ರೆಯು ಆಯುರ್ವೇದದ ಎಲ್ಲಾ ವಿಭಾಗಗಳೂ ಪಂಚಕರ್ಮ ಶಸ್ತ್ರ ಕರ್ಮ ಸ್ತ್ರೀರೋಗ ಕಣ್ಣು ಕಿವಿ ಮೂಗು ಚರ್ಮ ಮುಂತಾದ ಚಿಕಿತ್ಸಾ ಸೌಲಭ್ಯಗಳ ಸಹಿತದ ಅತ್ಯಂತ ನುರಿತ ವೈದ್ಯ ತಂಡದಿಂದ ಕೂಡಿದೆ. ವಿಶೇಷವಾದ ರಕ್ಷಾ ಕವಚವೆಂಬ ರಿಯಾಯಿತಿ ದರದ ಚಿಕಿತ್ಸಾ ಸೌಲಭ್ಯವುಳ್ಳ ಕಾರ್ಡ್ ಸಹ ನೀಡಿ ಯಾವತ್ತೂ ಚಿಕಿತ್ಸಾ ಸೌಲಭ್ಯಪಡೆಯುವಂತೆ ಮಾಡಲಾಗಿದೆ ಎಂದರು.
ನಂತರ ಅಧ್ಯಕ್ಷೀಯ ಭಾಷಣ ಮಾಡಿದ ಕಮಾಂಡರ್ ಸತ್ಯನಾರಾಯಣ ಅವರು ಕಣಚೂರು ಆಯುರ್ವೇದ ಆಸ್ಪತ್ರೆಯ ವತಿಯಿಂದ ನಡೆಸಲಾಗುವ ಉಚಿತ ಸೇವಾ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಸುಮಾರು 350 ಮಂದಿ ಈ ಉಚಿತ ಚಿಕಿತ್ಸಾ ಶಿಬಿರ ಸೌಲಭ್ಯದ ಸದುಪಯೋಗ ಪಡೆದರು.
ಈ ವೇಳೆ ಆಸ್ಪತ್ರೆಯ ವೈದ್ಯಕೀಯ ಮುಖ್ಯಸ್ಥ ಡಾ. ಕಾರ್ತಿಕ್ ಶೇಟ್, ಡಾ ಕೇಶವ ರಾಜ್, ಡಾ. ಸೌಮ್ಯ ಅಶೋಕ್, ಡಾ. ಚರಣ್, ಡಾ. ರಾಜೇಶ್, ಡಾ. ಮೈನಾಜ್ ರವರು ತಪಾಸಣೆ ನಡೆಸಿದರು. ಧೀಕ್ಷಾ, ಶ್ರಾವ್ಯಾ ಹಾಗೂ ತಿಟ್ಟಿಯವರು ಸಹಾಯಕರಾಗಿದ್ದರು.