ಬೆಳಗಾವಿ : ತಾಲೂಕಿನ ಉಚಗಾಂವ್ ಗ್ರಾಮದಲ್ಲಿ ಮದಗಜದ ದಾಳಿಗೆ ಕಾರೊಂದು ಜಖಂಗೊಂಡ ಘಟನೆ ನಡೆದಿದೆ. ಉಚಗಾಂವ-ಬೆಕ್ಕಿನಕೆರೆ ಮಾರ್ಗದಲ್ಲಿ ಡಾ.ನಿರಂಜನ್ ಕದಮ್ ಅವರ ಮನೆಯಿದೆ. ಅವರ ಮನೆ ಆವರಣಕ್ಕೆ ನುಗ್ಗಿದ ಮದಗಜ ಅಲ್ಲಿಯೇ ಪಾರ್ಕ್ ಮಾಡಿದ್ದ ಕಾರನ್ನು ಎತ್ತಿ ಬೀಸಾಕಿ ಜಖಂಗೊಳಿಸಿದೆ.
ಗೋವಾದ ಮಡಗಾಂವನಿಂದ ಸಚೀನ್ ಪಾಟೀಲ್ ಅವರ ಪತ್ನಿ ಕದಮ್ ಅವರ ಮನೆಯಲ್ಲಿದ್ದರು. ಅವರನ್ನ ಮರಳಿ ಕರೆದುಕೊಂಡು ಹೋಗಲು ರಾತ್ರಿ ಕಾರು ತಂದು ನಿಲ್ಲಿಸಿದ್ದರು. ಬೆಳಗಿನ ಜಾವ 1:30 ರ ಸುಮಾರಿಗೆ ಆನೆ ಚಾಳೋಬಾ ಗಣೇಶ್ ಎಂದು ಕರೆಯಲಾಗುವ ಗಜರಾಜ ಕಾರಿನ ಮೇಲೆ ದಾಳಿ ನಡೆಸಿದ್ದಾನೆ. ಕಾಲಿನಿಂದ ಒದ್ದು ಒದ್ದು ಕಾರನ್ನು ಪುಡಿ ಪುಡಿಯಾಗಿಸಿದ್ದಾನೆ. ಅಲ್ಲದೇ ಹತ್ತಿರವೇ ಇರುವ ಸಂಭಾಜೀರಾವ್ ಕದಮ್ ಮತ್ತು ಕಿರಣ್ ಕದಮ್ ಅವರ ಮನೆಯ ಬಳಿಯಿದ್ದ ಎರಡು ಪ್ಲಾಸ್ಟಿಕ್ ನೀರಿನ ಟ್ಯಾಂಕುಗಳನ್ನು ಕೂಡ ಗಜರಾಜ್ ಒಡೆದು ಹಾಕಿದ್ದಾನೆ.
ಇದರಿಂದಾಗಿ ಜನರಲ್ಲಿ ಭೀತಿಯ ವಾತಾವರಣ ಸೃಷ್ಠಿಯಾಗಿದೆ. ಈ ಹಿಂದೆ ಓಂಕಾರವೆಂಬ ಆನೆ ತಾಲ್ಲೂಕಿನ ಧಾಮಣೆ ಗ್ರಾಮದಲ್ಲಿ ಅಟ್ಟಹಾಸ ಮೆರೆದಿತ್ತು. ಗೋಡಂಬಿ ಕೀಳುತ್ತಿದ್ದ ರೈತನ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಗಾಯಗೊಂಡ ರೈತ ಸಾವನ್ನಪ್ಪಿದ್ದ. ಹೀಗಾಗಿ, ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.