ನಿಪ್ಪಾಣಿ: ನಗರದಲ್ಲಿ ಭವಿಷ್ಯದಲ್ಲಿಯೂ ನೀರಿನ ಕೊರತೆ ಉಂಟಾಗದಂತೆ ಪೂರೈಕೆ ವ್ಯವಸ್ಥೆಯನ್ನು ಬಲಪಡಿಸಲು ಮಹತ್ವದ ಹೆಜ್ಜೆ ಇಡಲಾಗಿದೆ. ಅಮೃತ 2.0 ಯೋಜನೆಯಡಿಯಲ್ಲಿ ನಿಪ್ಪಾಣಿ ನಗರಕ್ಕಾಗಿ ರೂಪಿಸಲಾಗಿರುವ ಕುಡಿಯುವ ನೀರಿನ ಯೋಜನೆಯು ಕೇಂದ್ರ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದುಕೊಂಡಿದೆ ಎಂದು ನಿಪ್ಪಾಣಿ ಶಾಸಕೆಯಾದ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಈ ಯೋಜನೆಯು 2050ರ ವರೆಗೆ ನಗರಕ್ಕೆ ತೊಂದರೆಯಿಲ್ಲದ ನೀರಿನ ಪೂರೈಕೆಯನ್ನು ಗುರಿಯಾಗಿಟ್ಟುಕೊಂಡಿದ್ದು, ಜವಾಹರ ಕೆರೆಯಲ್ಲಿ ನೀರಿನ ಶೇಖರಣೆ ಸಾಮರ್ಥ್ಯ ಹೆಚ್ಚಿಸುವ ಯೋಜನೆಯೂ ಒಳಗೊಂಡಿದೆ. ಈ ಕಾರ್ಯಕ್ಕಾಗಿ ಬಿಹಾರ ರಾಜ್ಯದ ಪಾಟ್ನಾದ ನಳಂದಾ ಎಂಜಿಕೋನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಲಾಗಿದೆ.
ಯೋಜನೆಯಡಿಯಲ್ಲಿ ವೇದಗಂಗಾ ನದಿಯಿಂದ ನೀರನ್ನು ಜವಾಹರ ಕೆರೆಯವರೆಗೆ ಪಂಪ್ ಮಾಡುವುದಕ್ಕಾಗಿ ಸುಮಾರು 7.70 ಕಿಲೋಮೀಟರ್ ಉದ್ದದ ಪೈಪಲೈನ್ ಅಳವಡಿಸುವ ಉದ್ದೇಶವಿದೆ. ಈ ಕಾಮಗಾರಿ ವೇಳೆ ಅಗೆದ ರಸ್ತೆಯನ್ನು ನಂತರ ಮರುನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಯ ಅನುಷ್ಠಾನದಿಂದ ನಿಪ್ಪಾಣಿ ನಗರದ ನಾಗರಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಿದ್ದು, ಭವಿಷ್ಯದಲ್ಲಿ ನೀರಿನ ತೊಂದರೆಗಳಿಗೆ ಮುಕ್ತಿಯಾಗಲಿದೆ.