ಮೈಸೂರು: ಸಮಾಜ ಸೇವೆಯ ವಿವಿಧ ಕ್ಷೇತ್ರಗಳಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿರುವ ರಾಜೇಂದ್ರ ನಗರದ ಗೋವಿತ್ ಕಿರಣ್ ಅವರಿಗೆ ಕರ್ಣಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ‘ಸೇವಾ ಭೂಷಣ’ ಪ್ರಶಸ್ತಿ ಲಭಿಸಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೀಸಲಾತಿ ಜಾರಿಗೆ ತಂದ 105ನೇ ವರ್ಷಾಚರಣೆಯ ಅಂಗವಾಗಿ, ವೇದಿಕೆಯ 13ನೇ ವಾರ್ಷಿಕೋತ್ಸವದ ಭಾಗವಾಗಿ ಮೈಸೂರು ಕಲಾಮಂದಿರದ ಕಿರು ರಂಗಮಂದಿರದಲ್ಲಿ ಶನಿವಾರ ನಡೆಯುವ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಲಿದೆ.
ಕಾಲೇಜು ಅವಧಿಯಲ್ಲಿ ಎನ್‌ಎಸ್‌ಎಸ್ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಗೋವಿತ್ ಕಿರಣ್, ಗ್ರಾಮೀಣ ಶಿಬಿರಗಳಲ್ಲಿ ಭಾಗವಹಿಸಿ ಗ್ರಾಮಾಭಿವೃದ್ಧಿಗೆ ಒತ್ತು ನೀಡಿದವರು. ನಂತರ ಉನ್ನತ ವಿದ್ಯಾಭ್ಯಾಸದ ನಂತರ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆಗೆ ರಾಜ್ಯ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ.
ಸದ್ಯ ಅವರು ದಾನಿಗಳ ಸಹಕಾರದಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆಯ ಜತೆಗೆ, 100ಕ್ಕೂ ಹೆಚ್ಚು ಅಂಧ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಸಹಾಯಕ ಬರಹಗಾರರಾಗಿ ಬೆನ್ನೆಲುಬಾಗಿ ನಿಂತಿದ್ದಾರೆ. ಬಿಡುವಿನ ವೇಳೆಯಲ್ಲಿ ಶಾಲೆಗಳಿಗೆ ಭೇಟಿ ನೀಡಿ ಜೀವನೋಪಾಯ ಕೌಶಲ್ಯ ತರಗತಿಗಳನ್ನು ಸಹ ನೀಡುತ್ತಿದ್ದಾರೆ.
ಪರಿಸರ ಸಂರಕ್ಷಣೆಯತ್ತ ಕಾಳಜಿವಹಿಸಿ ಸಸಿಗಳ ನೆಡುವ ಕಾರ್ಯದಲ್ಲಿ ತೊಡಗಿರುವ ಅವರು, ಜಾನಪದ ಕಲೆಗಳಲ್ಲಿ ಕಂಸಾಳೆ ಕಲೆಯ ತರಬೇತಿಯುಳ್ಳವರಾಗಿದ್ದಾರೆ. ಸಾರ್ವಜನಿಕ ಜಾಗೃತಿಗಾಗಿ ಬೀದಿ ನಾಟಕಗಳನ್ನೂ ನಡೆಸಿದ್ದಾರೆ.
ಈ ಎಲ್ಲ ಸಾಮಾಜಿಕ ಸೇವೆಗಳಿಗೆ ಕೃತಜ್ಞತೆಯಾಗಿ, ವೇದಿಕೆಯ ವತಿಯಿಂದ ‘ಸೇವಾ ಭೂಷಣ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷೆ ಎಚ್.ಎಲ್. ಯಮುನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.