ರಾಯಬಾಗ: ನಗರದ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶಾಖಾ ಮಠದಲ್ಲಿ ಗುರುಪೂರ್ಣಿಮೆಯ ನಿಮಿತ್ತ ವಿಶೇಷ ಕಾರ್ಯಕ್ರಮಗಳು ಇಂದು ವಿಜೃಂಭಣೆಯಿಂದ ಜರುಗಿದವು. ಈ ಸಂದರ್ಭದಲ್ಲಿ ಇಬ್ಬರು ಗಣ್ಯರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಹುಕ್ಕೇರಿ ಹಿರೇಮಠದ ಶ್ರೀ ಷ.ಬ್ರ. ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳವರ ಪಾದಪೂಜೆಯನ್ನು ಅರುಣ ಐಹೊಳೆ ದಂಪತಿಗಳು ನೆರವೇರಿಸಿ, ಗುರುವಿಗೆ ಗೌರವ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಇಲಕಲ್‌ನ ಶ್ರೀ ಅನ್ನದಾನೇಶ್ವರ ಶಿವಲಿಂಗ ಶಾಸ್ತ್ರಿಗಳಿಗೆ “ಷಟಸ್ಥಲ ಪ್ರಭೋದಕ” ಪ್ರಶಸ್ತಿಯನ್ನು, ಹಾಗೂ ಕಪರಟ್ಟಿ-ಕಳ್ಳಿಗುದ್ದಿ ಹಿರೇಮಠದ ಶ್ರೀ ಬಸವರಾಜ ಸ್ವಾಮಿಗಳಿಗೆ “ಬ್ರಹ್ಮಶ್ರೀ” ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಶ್ರೀ ಡಿ.ಎಂ. ಐಹೊಳೆ, ಹುಕ್ಕೇರಿ ಹಿರೇಮಠದ ಹೆಗ್ಗಳಿಕೆಯನ್ನು ಶ್ಲಾಘಿಸಿದರು. “ಹುಕ್ಕೇರಿ ಹಿರೇಮಠ ಎಂದರೆ ಇಡೀ ದೇಶದಲ್ಲಿ ಹೆಸರು ಮಾಡಿದೆ. ನಮ್ಮೂರಿನಲ್ಲಿಯೂ ಕೂಡ ಹುಕ್ಕೇರಿ ಹಿರೇಮಠದ ಶಾಖೆ ಇದೆ ಎನ್ನುವುದೇ ನಮಗೆ ಹೆಮ್ಮೆ. ಇಲ್ಲಿ ಎಲ್ಲರನ್ನೂ ಕೂಡ ಸಮದೃಷ್ಟಿಯಿಂದ ನೋಡುವ ಅಪರೂಪದ ಗುರುಗಳು ನಮಗೆ ಸಿಕ್ಕಿದ್ದಾರೆ” ಎಂದು ಅವರು ಬಣ್ಣಿಸಿದರು. “ಗುರುಪೂರ್ಣಿಮೆ ಎಂದರೆ ಗುರುವನ್ನು ಗೌರವಿಸಿ, ಗುರುವಿನ ಆಶೀರ್ವಾದವನ್ನು ಪಡೆಯುವುದು ಎಂದರ್ಥ” ಎಂದು ಗುರುಪೂರ್ಣಿಮೆಯ ಮಹತ್ವವನ್ನು ವಿವರಿಸಿದರು.
“ಷಟಸ್ಥಲ ಪ್ರಭೋದಕ” ಪ್ರಶಸ್ತಿಯನ್ನು ಪಡೆದ ಶ್ರೀ ಅನ್ನದಾನೇಶ್ವರ ಶಿವಲಿಂಗ ಶಾಸ್ತ್ರಿಗಳು ಮಾತನಾಡಿ, “ಶ್ರೀಮಠದಿಂದ ನಮಗೆ ಷಟಸ್ಥಲ ಪ್ರಭೋದಕ ಪ್ರಶಸ್ತಿಯನ್ನು ಗುರುಗಳು ಅನುಗ್ರಹಿಸಿದ್ದಾರೆ. ನಾವು ಪ್ರಶಸ್ತಿಯನ್ನು ಪಡೆದುಕೊಳ್ಳುವುದು ಅಷ್ಟೇ ಅಲ್ಲ, ಅದನ್ನು ಅರಿತು ಆಚರಿಸಿ, ಷಟಸ್ಥಲಗಳ ತತ್ವವನ್ನು ಬದುಕಿನಲ್ಲಿ ರೂಢಿಸಿಕೊಳ್ಳುವ ಅವಶ್ಯಕತೆ ಇದೆ. ನಾನು ಖಂಡಿತ ಮಾಡುತ್ತೇನೆ” ಎಂದು ಭರವಸೆ ನೀಡಿದರು.
“ಬ್ರಹ್ಮಶ್ರೀ” ಪ್ರಶಸ್ತಿಯನ್ನು ಪಡೆದ ಕಪರಟ್ಟಿ-ಕಳ್ಳಿಗುದ್ದಿ ಹಿರೇಮಠದ ಶ್ರೀ ಬಸವರಾಜ್ ಸ್ವಾಮಿಗಳು ಮಾತನಾಡಿ, “ಬ್ರಹ್ಮಶ್ರೀ ಪ್ರಶಸ್ತಿಯನ್ನು ಅನುಗ್ರಹಿಸಿದ್ದಾರೆ. ಅದರಂತೆ ನಾವು ನಡೆದುಕೊಂಡು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತೇವೆ” ಎಂದು ತಿಳಿಸಿದರು.
ಸಾನಿಧ್ಯ ವಹಿಸಿ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು, ಗುರುಪೂರ್ಣಿಮೆಯ ನಿಜವಾದ ಆಶಯವನ್ನು ತಿಳಿಸಿದರು. “ಗುರುಪೂರ್ಣಿಮೆ ಎಂದರೆ ಬೇರೆ ಬೇರೆ ಕಡೆಗೆ ಹೋಗಿ ಬರುವುದಷ್ಟೇ ಅಲ್ಲ, ನಮ್ಮಲ್ಲಿರುವ ಮಠಗಳಲ್ಲಿ ಕೂಡ ಹೋಗಿ ಗುರುಗಳನ್ನು ಗೌರವಿಸಬೇಕು” ಎಂದು ಭಕ್ತರಿಗೆ ಕರೆ ನೀಡಿದರು.
ಹುಕ್ಕೇರಿ ಹಿರೇಮಠದ ಗುರುಕುಲದ ಮುಖ್ಯಸ್ಥ ಸಂಪತ್ ಕುಮಾರ ಶಾಸ್ತ್ರೀ ಅವರು ವೇದಘೋಷ ಮಾಡಿದರು. ರಾಯಬಾಗ ಹಿರೇಮಠದ ಪ್ರಧಾನ ಅರ್ಚಕ ನಿಂಗಯ್ಯ ಸ್ವಾಮಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ನಿಶಾಂತ ಸ್ವಾಮಿ, ಉದಯಕುಮಾರ್ ಶಾಸ್ತ್ರೀಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪೂಜೇರಿ ಸರ್ ನಿರೂಪಿಸಿದರು.
ಸಮಾರಂಭದಲ್ಲಿ ಸದಾಶಿವ ಘೋರ್ಪಡೆ, ಸದಾನಂದ ಹಾಳಿಂಗಳಿ, ಅರುಣ ಐಹೊಳೆ, ವಿವೇಕ್ ಯಮಕನಮರಡಿ, ಎಸ್.ಎಸ್. ಕಾಂಬಳೆ, ಡಾ. ಗಾಯತ್ರಿ ಎಸ್. ಬಾನೆ, ಶ್ರೀಮತಿ ಸುಶೀಲಾ ಡಿ. ಐಹೊಳೆ, ಮಹೇಶ್ ಕರಮಡಿ, ಭಾರತಿ ಲೋಹಾರ, ಎಸ್.ಎಸ್. ಅಮರಶೆಟ್ಟಿ, ಸಂಜು ಮೈಶಾಳಿ, ಅಶೋಕ್ ದೇಶಿಂಗೆ ಹಾಗೂ ಹುಕ್ಕೇರಿ ಹಿರೇಮಠದ ಸದ್ಭಕ್ತರು ಸೇರಿದಂತೆ ಅನೇಕ ಗಣ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143