ಹುಕ್ಕೇರಿ : ಹಿಡಕಲ್ ಜಲಾಶಯದ ಹತ್ತಿರದ ಹೊಸ್ಸುರಿನ ಶಶಿಕಾಂತ ಅಕ್ಕಪ್ಪ ನಾಯಿಕ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಆಗಿರುವ ಶ್ರೀಮತಿ ಅಕ್ಕಮ್ಮ ಕುರಣಿಯವರು ತಮ್ಮ ವಿದ್ಯಾರ್ಥಿಯನ್ನು ಇಟ್ಟಿಗೆ ಕೆಲಸದಿಂದ ಮರಳಿ ಶಾಲೆಗೆ ಕರೆತರುವ ಮೂಲಕ ಎಲ್ಲರಿಗೂ ಸ್ಪೂರ್ತಿಯಾದರು.
ಶಶಿಕಾಂತ ಅಕ್ಕಪ್ಪ ನಾಯಿಕ ಸರಕಾರಿ ಪ್ರೌಢ ಶಾಲೆ ಹೊಸ್ಸುರ ವಿದ್ಯಾರ್ಥಿಯಾದ ಬೈರು ಜಕಾಯಿ ಎಂಬ ಹುಡುಗ ಕೆಲವು ದಿನಗಳ ಹಿಂದೆ ತಮ್ಮ ಕುಟುಂಬದೊಂದಿಗೆ ಖಾನಾಪುರ ತಾಲೂಕಿನ ಬೆರಗಾವ್ ಗ್ರಾಮಕ್ಕೆ ಇಟ್ಟಿಗೆ ಬಟ್ಟೀಯ ಕೆಲಸಕ್ಕೆ ಹೋಗಿದ್ದ. ಇದನ್ನು ಅರಿತ ಶ್ರೀಮತಿ ಅಕ್ಕಮ್ಮ ಕುರಣಿಯವರು ವಿದ್ಯಾರ್ಥಿಯಿರುವ ಸ್ಥಳವನ್ನು ಕಂಡುಹಿಡಿದು ಅವನನ್ನು ಮರಳಿ ಶಾಲೆಗೆ ಕರೆತಂದಿದ್ದಾರೆ.
ವಿದ್ಯಾರ್ಥಿಯು ಶಾಲಾ ಕಲಿಕೆಯಲ್ಲಿ ಜಾನನಾಗಿದ್ದರು ಶಾಲೆ ತೊರೆದು ಕೆಲಸಕ್ಕೆ ತೆರಳಿದ್ದ. “ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ” ಎನ್ನುವ ಮಾತಿನಂತೆ ಅವನ ಗುರುವಾಗಿ ಅವನ ವಿದ್ಯಾಭ್ಯಾಸದ ಭವಿಷ್ಯತ್ತಿನ ಬಗ್ಗೆ ಯೋಚಿಸಿದ ಶ್ರೀಮತಿ ಅಕ್ಕಮ್ಮ ಅವರು ತಮ್ಮ ವಿದ್ಯಾರ್ಥಿಯನ್ನು ಮರಳಿ ಕರೆತಂದಿದ್ದಾರೆ. ಇದು ಎಲ್ಲರಿಗೂ ಸ್ಪೂರ್ತಿ ನೀಡುವ ವಿಷಯ. ಇನ್ನೂ ಇಂತಹ ಅನೇಕ ಮಕ್ಕಳು ತಮ್ಮ ಭವಿಷ್ಯದ ಅರಿವಿಲ್ಲದೆ ಶಾಲೆ ಬಿಟ್ಟು ಕೆಲಸಕ್ಕೆ ಸೇರಿದ್ದಾರೆ. ನಮ್ಮ ಸರ್ಕಾರ ನಮಗೆ ಶಿಕ್ಷಣಕ್ಕಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿದರು ನಮ್ಮ ಬಡ ಮಕ್ಕಳು ಅದರ ಲಾಭ ಪಡೆಯುವುದರಲ್ಲಿ ವಿಫಲರಾಗುತ್ತಿದ್ದಾರೆ. ಹಾಗಾಗಿ ಶ್ರೀಮತಿ ಅಕ್ಕಮ್ಮ ಕುರಣಿಯವರ ಈ ಕಾರ್ಯ ಎಲ್ಲರು ಮೆಚ್ಚುವಂತಹದ್ದು.