ನಡೆವ ಮಾರ್ಗದಲ್ಲಿ ಯಾವುದೋ ನಿರೀಕ್ಷೆಯಲ್ಲಿ ಒಂದು ಪುಟ್ಟ ಮಾವಿನ ಗೊರಟು ಎಷ್ಟೋ ಕಾಲದಿಂದ ಬಿದ್ದಿತ್ತು. ಯಾರೋ ಮಾವಿನ ಹಣ್ಣು ತಿಂದು ಬಿಸಾಕಿದ ಗೊರಟು. ನಡೆದಾಡುವವರೆಲ್ಲ ಅದನ್ನು ತುಳಿದು ಹೋಗುತ್ತಿದ್ದರು. ಒಂದು ದಿನ ನಡೆದುಹೋಗುತ್ತಿದ್ದ ವ್ಯಕ್ತಿಗೆ ಅದು ಕಣ್ಣಿಗೆ ಕಂಡು ಕೈಗೆ ತೆಗೆದುಕೊಂಡು. ಪುಟ್ಟ ಗೊರಟು ಮಾತಾಡಿತು ಪುಣ್ಯಾತ್ಮ ಕೆಳಗೆ ಬಿದ್ದಿದ್ದ ನನ್ನನ್ನು ಎತ್ತಿಕೊಂಡೆಯಲ್ಲ ನನಗೆ ತುಂಬಾ ಸಂತೋಷವಾಯಿತು ನಿನಗೆ ಧನ್ಯವಾದಗಳು ಎಂದಿತು. ಆ ವ್ಯಕ್ತಿ ಹೇಳಿದ ಪಾಪ ನೀನೊಂದು ಪುಟ್ಟ ಬೀಜ ಇಲ್ಲಿ ಎಷ್ಟೋ ಕಾಲದಿಂದ ಇಲ್ಲೇ ಬಿದ್ದು ಎಲ್ಲರೂ ತುಳಿದು ಹೋಗುತ್ತಿದ್ದರು. ಅವರೆಲ್ಲರ ತುಳಿತಕ್ಕೆ ಸಿಕ್ಕಿ ನೀನು ಎಷ್ಟು ನೋವು ಅನುಭವಿಸಿದೆ ಪಾಪ ಎಂದನು. ಬೀಜ ಹೇಳಿತು, ಪುಣ್ಯಾತ್ಮ ನನ್ನನ್ನು ಇದುವರೆಗೂ ಲೆಕ್ಕವಿಲ್ಲದಷ್ಟು ಜನ ತುಳಿದು ಹೋಗಿರಬಹುದು, ತುಳಿದು ಹೋದವರ ಬಗ್ಗೆ ನನಗೆ ಚಿಂತೆ ಇಲ್ಲ. ಎಂದೋ ಒಂದು ದಿನ ಒಬ್ಬ ಒಳ್ಳೆ ಮನುಷ್ಯ ಬಂದೇ ಬರುತ್ತಾನೆ ಅವನು ನನ್ನನ್ನು ಎತ್ತುತ್ತಾನೆ ಎಂದು ದಾರಿ ಕಾಯುತ್ತಿದ್ದೆ. ನನ್ನನ್ನು ತುಳಿದು ಹೋದವರ ಬಗ್ಗೆ ನಾನೆಂದು ತಲೆ ಕೊಡಿಸಿಕೊಂಡಿಲ್ಲ. ಅದೆನೂ ಅಷ್ಟು ಮಹತ್ವ ವಾದ ವಿಷಯ ಅಲ್ಲ. ಆದರೆ ಯಾರೋ ಒಬ್ಬ ಬಂದು ನನ್ನನ್ನು ಎತ್ತುತ್ತಾನೆ ಎಂಬುದು ನನಗೆ ಮಹತ್ವವಾದದ್ದು.
ಅಂತ ವ್ಯಕ್ತಿಗಾಗಿ ಈ ತನಕ ದಾರಿ ಕಾಯುತ್ತಿದ್ದೆ ಎಂದು ಗೊರಟು ಹೇಳಿತು. ಪುನಃ ಹೇಳಿತು. ಪುಣ್ಯಾತ್ಮನೆ ನನಗಾಗಿ ಇನ್ನೊಂದು ಕೆಲಸ ಮಾಡು, ಜನಗಳ ಸಂಚಾರ
ಇಲ್ಲದ ಕಡೆ ಪುಟ್ಟ ಪಾತಿ ಮಾಡಿ ನನ್ನನ್ನು ಮಣ್ಣಿನಲ್ಲಿ ಹಾಕಿ ಸ್ವಲ್ಪ ನೀರು ಹಾಕು.
ಮುಂದೆ ಏನೆಲ್ಲ ಮಾಡುವೆನೋ ನೋಡು ಯಾರೂ ಊಹಿಸದಷ್ಟು ಒಳ್ಳೆಯದು ಮಾಡುತ್ತೇನೆ. ನನ್ನಲ್ಲಿ ಏನೂ ಇಲ್ಲ, ಆದರೆ ಏನೆಲ್ಲ ಇದೆ. ನನಗೆ ಬೇಕಾಗಿರುವುದು ಒಂದು ಹಿಡಿ ಮಣ್ಣು ಸ್ವಲ್ಪ ನೀರು ಅಷ್ಟೇ, ನನಗೆ ಉತ್ತುವುದು ಬಿತ್ತುವುದು ಗೊಬ್ಬರ ನನ್ನ ಸುತ್ತ ಬೇಲಿ, ಕಾಂಪೌಂಡ್, ರಕ್ಷಣೆ ಯಾವುದು ಬೇಡ ಒಂದು ಸ್ವಲ್ಪ ನೀರು ಹಾಕಿ ನೋಡು,ಜಗತ್ತಿಗೆ ಸಂತೋಷ – ಸಂತೃಪ್ತಿ ಕೊಡುವೆ.
ಆ ಮನುಷ್ಯ ಬೀಜವನ್ನು ಜನ ಸಂಚಾರವಿಲ್ಲದ ಒಂದು ಜಾಗದಲ್ಲಿ ಸ್ವಲ್ಪ ಗುಂಡಿ ಮಾಡಿ ಬೀಜ ಊರಿ ಅದರ ಮೇಲೆ ಮತ್ತಷ್ಟು ಮಣ್ಣು ಹಾಕಿ ಮುಚ್ಚಿ ನೀರು ಹಾಕಿದ. ಬೀಜ ಸಂತೋಷದಿಂದ ಮನುಷ್ಯನಿಗೆ, ನೀನು ನನ್ನನ್ನು ಒಳ್ಳೆಯ ಜಾಗದ ಲ್ಲಿ ಸೇರಿಸಿದೆ. ಇನ್ನು ನಿನ್ನ ಊರಿಗೆ ಹೊರಡು ಸ್ವಲ್ಪ ವರ್ಷಗಳಾದ ಮೇಲೆ ಬಂದು ನೋಡು ನೀನು ಹಾಕಿದ ಮಣ್ಣು ಮತ್ತು ನೀರಿನಿಂದ ನಾನು ಏನೆಲ್ಲಾ ಮಾಡುವೆ ನೀನೇ ಆಶ್ಚರ್ಯ ಪಡುವೆ. ಈಗ ಇದ್ದಂತೆ ನಾನಿರುವುದಿಲ್ಲ ಈ ಕ್ಷಣದಿಂದಲೇ ಬೆಳೆ ಯಲು ಶುರು ಮಾಡುವೆ ಎಂದು ಬೆಳೆಯತೊಡಗಿತು. ವಿಸ್ತಾರವಾಗಿ ಎಲ್ಲಾ ಕಡೆ ಹರಡಿತು. ಹಸಿರೆಲೆಗಳು ತುಂಬಿದವು, ಗಿಡದ ತುಂಬಾ ಹೂವಾಗಿ, ಕಾಯಾಯಿತು. ಮರದ ತುಂಬ ರಸಭರಿತವಾದ ಮಾವಿನ ಹಣ್ಣುಗಳು ತುಂಬಿತು. ಮಾವಿನ ಮರ
ಎಲ್ಲರೂ ನನ್ನ ಹತ್ತಿರ ಬರಲಿ ಬರಲಿ ಎಂದು ದಾರಿ ಕಾಯುತ್ತಿತ್ತು. ಜನಗಳು ಬಂದರು ಹಣ್ಣು ತಿಂದರು. ಮರದ ನೆರಳಲ್ಲಿ ಕುಳಿತು ವಿಶ್ರಾಂತಿ ಪಡೆದರು.
ಎಲ್ಲೆಲ್ಲಿಂದಲೂ ಹಿಂಡು ಹಿಂಡು ಪಕ್ಷಿಗಳು ಹಾರಿ ಬಂದವು, ಹಣ್ಣು ತಿಂದವು ಅಲ್ಲಿಯೇ ಗೂಡು ಕಟ್ಟಿದವು . ಸಂತೋಷದಿಂದ ಚಿಲಿಪಿಲಿ ಗುಟ್ಟಿದವು. ಒಂದು ಹಣ್ಣಿನ ಮರದ ಸುತ್ತ ನಿತ್ಯವು ವಸಂತೋತ್ಸವ ನಡೆಯಿತು. ಹಿಂದೆ ಬೀಜ ನೆಟ್ಟು ನೀರು ಹಾಕಿ ಹೋಗಿದ್ದ ಮನುಷ್ಯ ಒಮ್ಮೆ ಬಂದು ನೋಡುತ್ತಾನೆ ನಾನು ಹಾಕಿದ ಬೀಜ ಎಲ್ಲಿ ಎಂದು ಹುಡುಕಿದ ಅವನನ್ನು ನೋಡಿ ಮರ ಹೇಳಿತು. ನಾನು ಈಗ ಪುಟ್ಟ ಬೀಜ ಅಲ್ಲ ಶ್ರೀಮಂತ ವೃಕ್ಷ. ನನ್ನೊಳಗೆ ಆನಂದವಿದೆ ತೃಪ್ತಿ ಇದೆ. ನೀನು ಒಂದು ಹಿಡಿ ಮಣ್ಣು ಬೊಗಸೆ ನೀರು ಹಾಕಿದೆ. ನಾನು ಎಲ್ಲಿಯೂ ಹೋಗದೆ ಇಲ್ಲಿಯೇ ಇದ್ದು ನನ್ನನ್ನೇ ನಾನು ಸಂಪತ್ತಾಗಿ ಮಾಡಿ ಕೊಂಡೆ, ನನ್ನಲ್ಲಿರುವ ಸಂಪತ್ತನ್ನು ಎಲ್ಲರಿಗೂ ಹಂಚಿದೆ, ಸಿಹಿಯನ್ನು ತಿನ್ನಿಸಿದೆ, ತಂಪು ಮಾಡಿದೆ, ಪಶು ಪಕ್ಷಿಗಳ ವಂಶಾಭಿವೃದ್ಧಿ ಮಾಡಲು ವಸತಿ ಕೊಟ್ಟೆ. ಎಷ್ಟೋ ಜನ ನನ್ನ ತುಳಿದರು ಆದರೆ ನಿನ್ನಂಥ ಒಬ್ಬ ಪುಣ್ಯಾತ್ಮ ನನ್ನನ್ನು ಮೇಲೆತ್ತಿ ಒಳ್ಳೆಯ ಜಾಗದಲ್ಲಿ ಇಟ್ಟು ಮಣ್ಣು ನೀರು ಕೊಟ್ಟೆ ಅದರಿಂದ ನಾನು ಬೆಳೆದೆ ಎಂದು ಪುಣ್ಯಾತ್ಮನನ್ನು ವೃಕ್ಷ ಕೊಂಡಾಡಿತು.
ಆ ಪುಟ್ಟ ಬೀಜ ಹೇಳಿದಂತೆ, ಅದು ಬೆಳೆದು ವೃಕ್ಷವಾಗಿ ಫಲ ಪುಷ್ಪಗಳೇ ಅದರ ಆನಂದದ ರೂಪ. ಎಲ್ಲರಿಗೂ ಹಾಗೆ ಸುಂದರವಾದ ಜೀವನಕ್ಕೆ ಹೆಚ್ಚೇನೂ ಬೇಡ. ಮನಸ್ಸಿನಲ್ಲಿ ತೃಪ್ತಿ, ಸ್ವತಂತ್ರವಾಗಿರಬೇಕು, ನಮ್ಮ ಮನಸ್ಸು ಬಂಧನದಲ್ಲಿ ಸಿಲುಕ ಬಾರದು. ಎಲ್ಲವೂ ನನಗೆ ಬೇಕು ಬಂದಷ್ಟೂ ಸಾಲದು ಎಂಬ ಮನಸ್ಸಿನಿಂದ ಏನು ಮಾಡಲು ಆಗುವುದಿಲ್ಲ. ಬೇಕು ಬೇಕು ಎಂದಷ್ಟು ದೇಹವೇ ಚಿಂತೆಯ ಗೂಡಾಗು ತ್ತದೆ. ನಾನು ನನಗೆ ಎನ್ನುವುದನ್ನು ಬಿಟ್ಟು ಜಗತ್ತಿನ ಒಳಿತಿಗಾಗಿ ಏನಾದರೂ ಮಾಡಬೇಕು ಎಂಬ ಛಾತಿ, ಗಟ್ಟಿತನ, ದೃಢಸಂಕಲ್ಪ ಇದ್ದರೆ ಬೇಕಾದಷ್ಟು ಜಗತ್ತಿಗೆ ಕೊಡಬಹುದು.
:- ಆಶಾ ನಾಗಭೂಷಣ
ಸಂಗ್ರಹ :- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ