ಬೆಳಗಾವಿ: “ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಭ್ರಷ್ಟಾಚಾರ ನಿವಾರಣೆಗೆ ‘ಮಾಹಿತಿ ಹಕ್ಕು ಕಾಯ್ದೆ’ ಪರಿಣಾಮಕಾರಿ ಸಾಧನವಾಗಿದೆ. ಈ ಕಾಯ್ದೆಯಡಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ನಿಗದಿತ ಕಾಲಮಿತಿಯೊಳಗೆ ಮಾಹಿತಿ ಒದಗಿಸುವುದು ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಕಾನೂನುಬದ್ಧ ಕರ್ತವ್ಯವಾಗಿದೆ,” ಎಂದು ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಎ. ಎಂ. ಪ್ರಸಾದ ಅವರು ತಿಳಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅವರು ಮುಂದುವರೆದು, “ಯಾವುದೇ ಅಧಿಕಾರಿಯ ವೈಯಕ್ತಿಕ ಮಾಹಿತಿಯನ್ನು ನೀಡಲಾಗುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಅರ್ಜಿಗಳಿಗೆ ಮಾತ್ರ ಮಾಹಿತಿ ನೀಡಬೇಕು. ಮಾಹಿತಿ ನೀಡಲು ಸಮಂಜಸ ಕಾರಣವಿಲ್ಲದೇ ವಿಳಂಬವಾದರೆ ಅಥವಾ ತಪ್ಪು ಮಾಹಿತಿ ನೀಡಿದರೆ ದಂಡ ಹಾಗೂ ಶಿಸ್ತು ಕ್ರಮ ಕೈಗೊಳ್ಳಬಹುದು,” ಎಂದರು.
ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು ಇಪ್ಪತ್ತೆಂಟು ವರ್ಷಗಳು ಕಳೆದಿದ್ದು, ಬೆಳಗಾವಿಯಲ್ಲಿ 2019ರಲ್ಲಿ ಪೀಠ ಸ್ಥಾಪನೆಗೊಂಡಿದೆ. ಈವರೆಗೆ ಬೆಳಗಾವಿ ವಿಭಾಗದಲ್ಲಿ ಸುಮಾರು ಹನ್ನೆರಡು ಸಾವಿರಕ್ಕೂ ಅಧಿಕ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿಯಾಗಿವೆ. ಈ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಸಾರ್ವಜನಿಕರಿಗೆ ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗಲೆಂದು ಪ್ರತಿಯೊಂದು ಇಲಾಖೆಯ ಅಂತರ್ಜಾಲ ಪುಟದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರಿಗಳ ವಿವರಗಳನ್ನು ಪ್ರಕಟಿಸುವಂತೆ ಸೂಚನೆ ನೀಡಲಾಯಿತು.
ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ ಬಳಿಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳು (PIO) 30 ದಿನಗಳೊಳಗೆ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು (APIO) 45 ದಿನಗಳೊಳಗೆ ಉತ್ತರ ನೀಡಬೇಕು. ಕಂದಾಯ, ಗ್ರಾಮೀಣಾಭಿವೃದ್ಧಿ, ಪೊಲೀಸ್ ಇತ್ಯಾದಿ ಪ್ರಮುಖ ಇಲಾಖೆಗಳ ಮಾಹಿತಿ ಕೂಡಾ ಕಾಲಮಿತಿಯೊಳಗೆ ಒದಗಿಸಬೇಕೆಂದು ಅವರು ತಿಳಿಸಿದ್ದಾರೆ.
ಅರ್ಜಿದಾರರಿಗೆ ತ್ವರಿತ ಹಾಗೂ ಸಮರ್ಪಕ ಮಾಹಿತಿ ದೊರಕಿಸುವ ಉದ್ದೇಶದಿಂದ ಪ್ರತಿ ತಿಂಗಳು ‘ಮಾಹಿತಿ ಅಭಿಯಾನ’ ರೂಪದಲ್ಲಿ ಬಾಕಿ ಅರ್ಜಿಗಳ ವಿಲೇವಾರಿ ನಡೆಯಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿಯನ್ನು ಅಂತರ್ಜಾಲದಲ್ಲಿ ಪ್ರಕಟಿಸುವಂತೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧಿಕಾರಿಗಳಾದ ಮೊಹಮ್ಮದ್ ರೋಷನ್ ಮಾತನಾಡಿ, “ಮಾಹಿತಿ ಹಕ್ಕು ಕಾಯ್ದೆಯ ಅನುಷ್ಠಾನದಲ್ಲಿ ಅಧಿಕಾರಿಗಳು ಎದುರಿಸುವ ಅಡಚಣೆಗಳಿಗೆ ಪರಿಹಾರವಾಗುವಂತೆ ಈ ತರಬೇತಿ ಕಾರ್ಯಾಗಾರ ಪರಿಣಾಮಕಾರಿ. ಅಧಿಕಾರಿ–ಸಿಬ್ಬಂದಿಯು ಈ ಸಂದರ್ಭದಲ್ಲಿ ಸಂಪೂರ್ಣ ಅರಿವು ಹೊಂದಿದರೆ, ಅರ್ಜಿದಾರರಿಗೆ ಉತ್ತಮ ಸೇವೆ ಒದಗಿಸಬಹುದು,” ಎಂದರು.
ಕಾರ್ಯಾಗಾರದಲ್ಲಿ ಬೆಳಗಾವಿ ಪೀಠದ ಮಾಹಿತಿ ಆಯುಕ್ತ ನಾರಾಯಣ ಚನ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಜಿಲ್ಲೆಯಲ್ಲಿ ಬಾಕಿ ಇರುವ ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ವಿಶೇಷ ಸಭೆ ಆಯೋಜಿಸಲಾಗುವುದು ಎಂಬುದಾಗಿ ಅಧಿಕಾರಿಗಳು ತಿಳಿಸಿದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143