ಬಸ್ತವಾಡ (ಹುಕ್ಕೇರಿ), ಜುಲೈ 25, 2025: ಮಾನವ ಸಾಗಣೆ, ಲೈಂಗಿಕ ಶೋಷಣೆ, ಬಾಲ್ಯ ವಿವಾಹ, ಬಲವಂತದ ದುಡಿಮೆ ಹಾಗೂ ಕೌಟುಂಬಿಕ ದೌರ್ಜನ್ಯದಂತಹ ಗಂಭೀರ ಸಮಾಜವಿರೋಧಿ ಘಟನೆಗಳನ್ನು ನಿಯಂತ್ರಿಸಲು ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ನಡುವಿನ ಸಮನ್ವಯ ತುಂಬಾ ಅಗತ್ಯವಾಗಿದೆ ಎಂದು ಹುಕ್ಕೇರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜಣ್ಣ ಸಂಕಣ್ಣವರ ಹೇಳಿದರು.
ಬಸ್ತವಾಡ ಗ್ರಾಮದ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮವನ್ನು ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕಾ ಆಡಳಿತ, ವಿಹಾನ್ ಸಂಸ್ಥೆ ಹಾಗೂ ಮಹಿಳಾ ಪುನರ್ವಸತಿ ಕೇಂದ್ರ ಶಕ್ತಿ ಸದನ (ಹಿಡಕಲ್ ಡ್ಯಾಂ) ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿ ನ್ಯಾಯವಾದಿ ಶ್ರೀಮತಿ ಆಶಾ ಶಿಂಗಾಡಿ, ಮಹಿಳೆಯರಿಗೆ ಸ್ಥಳೀಯವಾಗಿ ಸುರಕ್ಷಿತ ಉದ್ಯೋಗ ನೀಡಿದರೆ ಮೋಸದ ಪ್ರಕರಣಗಳು ಕಡಿಮೆಯಾಗಬಹುದು ಎಂದು ತಿಳಿಸಿದರು. ಅವರು ಬಾಲ್ಯ ವಿವಾಹ, ಜನನ ಮತ್ತು ಮರಣ ನೋಂದಣಿ, ಹಾಗೂ ವಿವಾಹ ಜೀವನ ಕಾನೂನುಗಳ ಬಗ್ಗೆ ವಿವರ ನೀಡಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಬಿ. ಕುರುಬೇಟ ಮಾತನಾಡಿ, ಜನತೆ ಕೇವಲ ಹಕ್ಕುಗಳಲ್ಲ, ಕರ್ತವ್ಯಗಳ ಮೇಲೂ ಅರಿವು ಹೊಂದಬೇಕು ಎಂದರು. ಯಾವುದೇ ಮಾನವ ಹಕ್ಕು ಉಲ್ಲಂಘನೆಯ ಸಂದರ್ಭದಲ್ಲಿ ಕಾನೂನು ಸಹಾಯ ಪಡೆಯಬಹುದೆಂದು ಮನವರಿಕೆ ಮಾಡಿದರು.
ನ್ಯಾಯವಾದಿ ಬಿ.ಎಂ. ಜಿನರಾಳಿ ಅವರು ಅನೈತಿಕ ಸಾಗಣೆ ತಡೆ ಕಾಯ್ದೆ, ಲೈಂಗಿಕ ಕಿರುಕುಳ, ಮತ್ತು ಪಾಕ್ಸೋ ಪ್ರಕರಣಗಳನ್ನು ತಡೆಯಲು ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದೆಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಸರಕಾರಿ ವಕೀಲ ಎಂ.ಸಿ. ಕರೋಳಿ, ಜಂಟಿ ಕಾರ್ಯದರ್ಶಿ ವಿ.ಎಲ್. ಘಸ್ತಿ, ಖಜಾಂಚಿ ಎ.ಎ. ಬಾಗೇವಾಡಿ, ಮಹಿಳಾ ಪ್ರತಿನಿಧಿ ಎ.ಬಿ. ಕುಲಕರ್ಣಿ, ಟಿ.ಡಿ.ಪಿ.ಒ ಹೊಳೆಪ್ಪ, ಎ.ಸಿ.ಡಿ.ಪಿ.ಓ ಕಮಲಾ ಹಿರೇಮಠ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ ಕರಡಿ, ಗ್ರಾಮ ಪಂಚಾಯತ್ ಅಧ್ಯಕ್ಷ ಜಾವಲಸಾಬ್ ಬಾಡ್ಕರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಮತಿ ವೈಜಯಂತಿ ಚೌಗಲಾ ಅವರು ಮಾತನಾಡಿ, “ಸಂಸ್ಥೆ ವತಿಯಿಂದ ಶಕ್ತಿ ಸದನ ಯೋಜನೆಯ ಮೂಲಕ ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ನಿರ್ಲಕ್ಷಿತ ಮಹಿಳೆಯರು ಪಡೆದುಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಚಾರ್ಯ ಕಿರಣ್ ಚೌಗಲಾ ನೀಡಿದರು. ವಿಹಾನ್ ಸಂಸ್ಥೆಯ ಸಂಯೋಜಕಿ ರೇಖಾ ಬೆನಿವಾಡ ಕಾರ್ಯಕ್ರಮ ನಿರೂಪಿಸಿದರು ಮತ್ತು ಪ್ರಿಯಾಂಕಾ ವಂದನಾ ಸಲ್ಲಿಸಿದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143