ಇಂದು ಕನಕದಾಸ ಜಯಂತಿ. ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಪಟ್ಟಣಗಳಲ್ಲಿ ಎಲ್ಲೆಡೆ ಅವರ ಕೀರ್ತನೆಗಳು ಮೊಳಗುತ್ತಿವೆ. ಭಕ್ತಿಭಾವದಿಂದ ಜನರು ಅವರ ಜೀವನವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಆದರೆ ಕನಕದಾಸರನ್ನು ಕೇವಲ ನೆನೆದು, ಹಾಡುವುದಷ್ಟೇ ಸಾಕೇ? ಎಂಬ ಪ್ರಶ್ನೆ ನಮ್ಮನ್ನು ಯೋಚನೆಗೆ ಒಳಪಡಿಸುತ್ತದೆ.
ಕನಕದಾಸರು ಕೇವಲ ಕವಿ ಅಲ್ಲ, ಕೇವಲ ಹರಿದಾಸರೂ ಅಲ್ಲ. ಅವರು ಮನುಷ್ಯನ ಮೌಲ್ಯವನ್ನು ಗುರುತಿಸಿದ ಮಹತ್ವದ ಸಮಾಜ ಸುಧಾರಕರು.
ಅವರ ಕಾಲದಲ್ಲಿ ಜಾತಿ, ವರ್ಣ, ಗೋತ್ರ – ಇವೆಲ್ಲ ಮನುಷ್ಯನನ್ನು ಹೊಗಳುವ ಅಥವಾ ತಳ್ಳುವ ಕಾರಣವಾಗಿದ್ದವು.
ಅವರು ಆ ಕಾಲದ ಸಮಾಜಕ್ಕೆ ಸರಳವಾಗಿ ಹೇಳಿದರು: “ಕುಲ ಕುಲ ಎಂದು ಹೊಡದಾಡದಿರಿ ಹುಚ್ಚಹಪ್ಪಗಳಿರಾ, ಕುಲದ ನೆಲೆ ಬಲ್ಲಿರಾ?” “ಕುಲಗೌರವಕ್ಕಿಂತ ಗುಣಗೌರವ ಮಹತ್ವದದ್ದು” ಎಂದ ಅವರ ಮಾತು ಇಂದಿಗೂ ಸತ್ಯ.
ಇಂದೂ ಸಮಾಜದಲ್ಲಿ ಜಾತಿ-ಮತಿಯ ಬೇಧ, ಪರಸ್ಪರ ಅಸಹಿಷ್ಣುತೆ, ಅಹಂಕಾರ ಕಾಣುತ್ತೇವೆ. ಮನಸ್ಸಿನ ಕೋಣೆಗಳಲ್ಲಿ ನಾವು ಕಾಣದ ಗೋಡೆಗಳನ್ನು ಕಟ್ಟಿಕೊಂಡಿದ್ದೇವೋ ಎಂಬಂತೆ. ಆದರೆ ಕನಕದಾಸರ ಜೀವನ ನಮಗೆ ಹೇಳುವುದು ಒಂದೇ ಮಾತು —
ಒಳ್ಳೆಯತನ, ಸತ್ಯ, ಮನುಷ್ಯತ್ವ – ಇದೇ ನಿಜವಾದ ಬಲ-ಕುಲ.
ಇಂದು ನಾವು ಶಾಲೆಗಳಲ್ಲೂ, ಮನೆಗಳಲ್ಲೂ ಹಾಗೂ ಇಡೀ ಸಮಾಜದಲ್ಲಿ ಯುವಕರ ನಡುವೆಯೂ ಈ ಸಂದೇಶ ತಲುಪಬೇಕಿದೆ.
ಸ್ನೇಹ, ಸಹಕಾರ, ಒಬ್ಬರನ್ನೊಬ್ಬರು ಗೌರವಿಸುವ ಮನಸ್ಸು ಬೆಳೆಸಿಕೊಳ್ಳಬೇಕು. ಕನಕದಾಸ ಜಯಂತಿ ಆಚರಿಸುವುದು ಕೇವಲ ಆಚರಣೆ ಅಲ್ಲ. ಇದು ಮನಸ್ಸಿನ ಬೆಳಕು ಹಚ್ಚುವ ದಿನ.
ನಾವು ಯಾರೇ ಆಗಿರಲಿ, ಯಾವ ಕುಟುಂಬದವರೇ ಆಗಿರಲಿ,
ಮನುಷ್ಯರಾಗಿರುವುದು ದೊಡ್ಡದು, ಮನುಷ್ಯನಂತೆ ಬದುಕುವುದು ಇನ್ನೂ ದೊಡ್ಡದು.
ಆದ್ದರಿಂದ, ಕನಕದಾಸರನ್ನು ನೆನಸುವುದಷ್ಟೇ ಅಲ್ಲ,
ಅವರ ಸಂದೇಶವನ್ನು ನಮ್ಮ ಬದುಕಿನಲ್ಲಿ ನಡೆದು ತೋರಿಸೋಣ.
— ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143





















