
ಬೆಳಗಾವಿ: ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಬೆಳಗಾವಿ ಜಿಲ್ಲಾ ಜಾಗೃತ ಸಮಿತಿ ರಚನೆ ಸಭೆ ಹಾಗೂ ಸಮಿತಿ ಸದಸ್ಯರಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮವು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಇಂದು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಿ. ಎಸ್. ಚೌಗಲೆ ಅವರು, ಕನ್ನಡ ಪುಸ್ತಕಗಳನ್ನು ಓದುಗರ ಬಳಿಗೆ ತಲುಪಿಸುವ ಮಹತ್ವದ ಕೆಲಸವನ್ನು ಕನ್ನಡ ಪುಸ್ತಕ ಪ್ರಾಧಿಕಾರ ನಿರಂತರವಾಗಿ ಮಾಡುತ್ತಿದೆ ಎಂದು ಪ್ರಶಂಸಿಸಿದರು. ಇಂತಹ ಪ್ರಯತ್ನಗಳು ಕನ್ನಡ ಸಾಹಿತ್ಯದ ವಿಸ್ತಾರಕ್ಕೆ ಮತ್ತು ಓದುಗರ ಸಂಖ್ಯೆಯ ಹೆಚ್ಚಳಕ್ಕೆ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು, ಪ್ರಾಧಿಕಾರದ ಉದ್ದೇಶಗಳು, ಪ್ರಸ್ತುತ ನಡೆಯುತ್ತಿರುವ ಯೋಜನೆಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಮಟ್ಟದಲ್ಲಿ ಜಾಗೃತ ಸಮಿತಿಗಳ ರಚನೆಯಿಂದ ಕನ್ನಡ ಪುಸ್ತಕಗಳ ಪ್ರಚಾರ ಮತ್ತು ವಿತರಣೆಗೆ ಇನ್ನಷ್ಟು ಬಲ ಸಿಗಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಪ್ರಾಸ್ತಾವಿಕವನ್ನು ಕುಶಾಲ ಬರಗೂರ ಅವರು ನೆರವೇರಿಸಿದರು. ಹಿರಿಯ ಸಾಹಿತಿಗಳಾದ ಯಲ್ಲಪ್ಪ ಹಿಮ್ಮಡಿ ಹಾಗೂ ಶಂಕರ ಬಾಗೇವಾಡಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ಸಾಹಿತಿ ಶಂಕರ ಬಾಗೇವಾಡಿ ಅವರು ವಹಿಸಿದ್ದರು. ಸ್ವಾಗತ ಭಾಷಣವನ್ನು ಶ್ರೀನಿವಾಸ ಕರಿಯಪ್ಪ ಅವರು ನೆರವೇರಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಜಾಗೃತ ಸಮಿತಿ ಸದಸ್ಯರಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭ ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ: ಎಂ.ವೈ. ಮೆಣಸಿನಕಾಯಿ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143





















