ಓರ್ಪಿಂಗ್ಟನ್, ಲಂಡನ್: ಕರುನಾಡ ಅನಿವಾಸಿ ಹಿಂದೂಗಳ ಒಕ್ಕೂಟ (ಕ.ಹೋ.-UK) ತನ್ನ ವಾರ್ಷಿಕ ಶಿಬಿರವನ್ನು ಈ ಬಾರಿ ಗ್ರೇಟರ್ ಲಂಡನ್ನಿನ ಓರ್ಪಿಂಗ್ಟನ್ ನಲ್ಲಿರುವ ಪೋವೆರೆಸ್ಟ್ ಪ್ರಾಥಮಿಕ ಶಾಲೆಯಲ್ಲಿ ‘ಕರಾವಳಿಯ ಸೊಬಗಿನ ಶಿಬಿರ’ ಎಂಬ ಶೀರ್ಷಿಕೆಯಲ್ಲಿ ಯಶಸ್ವಿಯಾಗಿ ಆಯೋಜಿಸಿತು. ಶಿಬಿರವು ನೂರಕ್ಕೂ ಹೆಚ್ಚು ಕನ್ನಡಿಗರನ್ನು ಒಂದುಗೂಡಿಸಿತ್ತು.
ಈ ಶಿಬಿರದ ಉದ್ದೇಶ ಕರ್ನಾಟಕದ ಕರಾವಳಿ ಪ್ರದೇಶದ ಶ್ರೀಮಂತ ಪರಂಪರೆ, ಆಧ್ಯಾತ್ಮಿಕ ಹಿನ್ನೆಲೆ, ಭಾಷಾ ವೈವಿಧ್ಯ, ರಾಜಕೀಯ ಪಾಶ್ವಭೂಮಿ ಮತ್ತು ಕಲಾ-ಸಾಂಸ್ಕೃತಿಕ ಬದುಕು ಮತ್ತು ಅದರ ಆರ್ಥಿಕ ಮಹತ್ವವನ್ನು ಎತ್ತಿ ತೋರಿಸುವುದು. ಕಾರ್ಯಕ್ರಮ ಸ್ಥಳವನ್ನು ಕನ್ನಡ ಧ್ವಜಗಳು ಮತ್ತು ಭಾರತದ ತ್ರಿವರ್ಣಧ್ವಜಗಳಿಂದ ಅಲಂಕರಿಸಲಾಗಿತ್ತು.
ಕಾರ್ಯಕ್ರಮವು ಗಣೇಶ ಪ್ರಾರ್ಥನೆ ಹಾಗೂ ಮುಖ್ಯ ಅತಿಥಿ ದಿಗಂತ್ ದಾಸ್ ಜಿಯವರಿಂದ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಕಂಡಿತು. ಶಿಬಿರದ ಹಿನ್ನಲೆಯಲ್ಲಿ ಪ್ರಕಟಿಸಿದ ವಿಶೇಷ ಪುಸ್ತಕದ ಪರಿಚಯದೊಂದಿಗೆ ಮಕ್ಕಳಿಂದ ಶಿಬಿರ ಗೀತೆ ಗಾಯನ ನಡೆಯಿತು. ನಂತರ ದಿಗಂತ್ ದಾಸ್ ಜಿಯವರು ಪ್ರೇರಣಾದಾಯಕ ಬೌದ್ಧಿಕವನ್ನು ನೀಡಿದರು.
ಸಾಂಸ್ಕೃತಿಕ ವೈಭವ:
ವಿವಿಧ ವಯೋಮಾನದ ಮಕ್ಕಳಿಂದ ವಯಸ್ಕರ ತನಕದ ಭಾಗವಹಿಸುವಿಕೆಯಿಂದ ಕರಾವಳಿಯ ನೃತ್ಯ-ನಾಟಕ-ಸಂಗೀತ ಮೇಳವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ತುಳು ನೃತ್ಯ, ಪರಶುರಾಮನ ಪಾತ್ರ ನಿರ್ವಹಣೆ, ಸಿರಿಕೋಲಾ ಸಿರಿ ಆರಾಧನೆ, ಆಟಿ ಕಲೆಂಜ, ಸುಗ್ಗಿ ಕುಣಿತ, ಕೋಳಿ ಅಂಕ, ಹುಲಿ ಆಟ ಮತ್ತು ಉಡುಪಿ ಕೃಷ್ಣನ ಪಾತ್ರಗಳಿಂದ ಮಾರುಕಟ್ಟೆ ಆಕರ್ಷಣೆ ಜೋರಾಗಿತ್ತು. ಮಹಿಳೆಯರು ಕೂಡ ಕಡಲ ಹಬ್ಬ ಮತ್ತು ಯಕ್ಷಗಾನದ ವೈಶಿಷ್ಟ್ಯಪೂರ್ಣ ಪ್ರದರ್ಶನ ನೀಡಿದರು. “ಇಂತಹ ನೈಜ ಕಲಾ ಮತ್ತು ಸಂಸ್ಕೃತಿಯ ನೋಟ ಇಲ್ಲಿಯವರೆಗೂ ಲಂಡನ್ನಲ್ಲಿ ನೋಡಿರಲಿಲ್ಲ” ಎಂದು ಮೊದಲ ಬಾರಿಗೆ ಶಿಬಿರದಲ್ಲಿ ಭಾಗವಹಿಸಿದ ಭಾಗವಹಿಸವರು ಅಭಿಪ್ರಾಯಪಟ್ಟರು.
ಬೌದ್ಧಿಕ ಮತ್ತು ಚಟುವಟಿಕೆಗಳು:
ಮಂಗಳೂರು ಮೂಲದ ಶ್ರೀಕಾಂತ್ ಶೆಟ್ಟಿ ಜಿಯವರ ಆನ್‌ಲೈನ್ ಬೌದ್ಧಿಕ ಪ್ರಭಾವಿತಗೊಂಡಿತು. ಈ ಉಪನ್ಯಾಸದಿಂದಾಗಿ ಪ್ರೇಕ್ಷಕರಲ್ಲಿ ಚರ್ಚೆಗಳಿಗೆ ದಾರಿ ತೋರಿತು. ಮಕ್ಕಳನ್ನು ವಯೋಮಾನದ ಪ್ರಕಾರ ಗುಂಪು ಗೊಳಿಸಿ, ಶಿಶು-ಬಾಲಗಣ ಮತ್ತು ಕಿಶೋರ್-ಕಿಶೋರಿ ವಿಭಾಗಗಳಾಗಿ ವಿಭಜಿಸಿ ವಿವಿಧ ಶೈಕ್ಷಣಿಕ ಹಾಗೂ ಮನರಂಜನಾತ್ಮಕ ಚಟುವಟಿಕೆಗಳನ್ನು ನಡೆಸಲಾಯಿತು. “ನಾನು ಹೊಸ ಗೆಳೆಯರನ್ನು ಭೇಟಿಯಾಗಿ ಕರ್ನಾಟಕದ ಬಗ್ಗೆ ತುಂಬಾ ಕಲಿತೆ” ಎಂಬ ಮಕ್ಕಳ ಹರ್ಷದಲ್ಲಿ ಶಿಬಿರದ ಯಶಸ್ಸು ತೋರುತ್ತಿತ್ತು.
ಅಂತಿಮ ಅಧಿವೇಶನ:
ಮಧ್ಯಾಹ್ನದ ಅಧಿವೇಶನದಲ್ಲಿ ವಯಸ್ಕರಿಂದ ಕರಾವಳಿ ಸಂಬಂಧಿತ ಪಾತ್ರ ನಿರ್ವಹಣೆಗಳು ನಡೆದುವು. ನಂತರ ಸುಶೀಲ ಪಂಡಿತ್ ಜಿಯವರು ತಮ್ಮ ಸಮಾಪನ ಬೌದ್ಧಿಕವನ್ನು ನೀಡಿದರು. ಶಿಬಿರದ ಕೊನೆಯ ಅಂಶವಾಗಿ ಕ.ಹೋ. ಸೇವಾ ಯೋಜನೆಯಾದ “ಕರ್ನಾಟಕದ ಹಳೆಯ ಹಿಂದೂ ದೇವಾಲಯಗಳ ಪುನಶ್ಚೇತನ” ಕುರಿತು ಮಾಹಿತಿ ನೀಡಲಾಯಿತು. ಈ ಸೇವಾ ಯೋಜನೆಗಾಗಿ ಶಿಬಿರದಲ್ಲಿ ಟಿ-ಶರ್ಟ್ ಮತ್ತು ಹನುಮಾನ್ ಚಾಲಿಸಾ ಪುಸ್ತಕ ಮಾರಾಟದಿಂದ ಬಂದ ಆದಾಯವನ್ನು ದೇಣಿಗೆಯಾಗಿ ನೀಡಲಾಯಿತು.
ಧನ್ಯವಾದಗಳು ಮತ್ತು ಉತ್ತೇಜನ:
“ನಮ್ಮ ನಾಡಿನ ಬಗ್ಗೆ ಇಷ್ಟು ಆಳವಾದ ಅರಿವು ನೀಡುವ ಕಾರ್ಯಕ್ರಮವನ್ನು ಕನ್ನಡದಲ್ಲಿ ನಡೆಸಿದ ಅನುಭವ ಅತ್ಯಂತ ಸಂತೋಷದಾಯಕವಾಗಿದೆ” ಎಂದು ಭಾರತದಿಂದ ಕುಟುಂಬದೊಂದಿಗೆ ಆಗಮಿಸಿದ್ದ ಪೋಷಕರು ತಮ್ಮ ಭಾವನೆ ವ್ಯಕ್ತಪಡಿಸಿದರು.
ಋಗ್ವೇದದ “ಚರೈವೇತಿ ಚರೈವೇತಿ” ಎಂಬ ಮಾತು ನಮಗೆ ದಿಕ್ಕು ತೋರಿಸುವಂತಿದೆ—ಒಗ್ಗಟ್ಟಾಗಿ, ಉತ್ಸಾಹದಿಂದ ಮುಂದಕ್ಕೆ ಸಾಗೋಣ ಎಂಬ ಸಂದೇಶವನ್ನು ಶಿಬಿರ ಕೊನೆಗೆ ನೀಡಿತು.
ವರದಿ: ಶ್ರೀಮತಿ ಶಾಲಿನಿ ಜ್ಞಾನಸುಬ್ರಮಣಿಯನ್
ಕಾರ್ಡಿಫ್, ವೇಲ್ಸ್ – ಕ.ಹೋ. UK
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143