Live Stream

[ytplayer id=’22727′]

| Latest Version 8.0.1 |

Local NewsState News

ಶಿಕ್ಷಣ ಇಲಾಖೆಗೆ ಲೋಕಾ ಶಾಕ್: 12 ಕಚೇರಿಗಳ ಮೇಲೆ ಏಕಕಾಲದ ದಾಳಿ – ಭ್ರಷ್ಟಾಚಾರದ ದಾಖಲೆಗಳು ವಶ!

ಶಿಕ್ಷಣ ಇಲಾಖೆಗೆ ಲೋಕಾ ಶಾಕ್: 12 ಕಚೇರಿಗಳ ಮೇಲೆ ಏಕಕಾಲದ ದಾಳಿ – ಭ್ರಷ್ಟಾಚಾರದ ದಾಖಲೆಗಳು ವಶ!

 

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ, ಅಧಿಕಾರಿಗಳ ಕರ್ತವ್ಯ ಲೋಪ ಹಾಗೂ ಸಾರ್ವಜನಿಕರ ಮೇಲೆ ನಡೆಯುತ್ತಿರುವ ಲಂಚ–ಪೀಡನೆ ಸಂಬಂಧಿಸಿದಂತೆ ಪ್ರತಿದಿನವೂ ದೂರುಗಳ ಸುರಿಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ, ಲೋಕಾಯುಕ್ತವು ಭಾರೀ ಮಟ್ಟದ ದಾಳಿಯನ್ನು ನಡೆಸಿದೆ. ಗುರುವಾರ ಬೆಳಗ್ಗಿನಿಂದಲೇ ಇಲಾಖೆಯ ವಿವಿಧೆಡೆಯ 12 ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಯಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ಆದೇಶದ ಮೇರೆಗೆ, ಬಂಗಳೂರಿನ ಜಂಟಿ ನಿರ್ದೇಶಕರ (ಆಡಳಿತ) ಕಚೇರಿ, ಉಪ ನಿರ್ದೇಶಕರ (ಸಾರ್ವಜನಿಕ ಶಿಕ್ಷಣ) ಕಚೇರಿ ಹಾಗೂ 9 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳ ಮೇಲೆ ಪ್ರತ್ಯೇಕ 12 ತಂಡಗಳು ದಾಳಿ ನಡೆಸಿವೆ. ದೂರುಗಳ ಪರಿಶೀಲನೆಗಾಗಿ ನಡೆಸಿದ ಗೌಪ್ಯ ತನಿಖೆಯಲ್ಲಿ ಆರೋಪಗಳು ನಿಜ ಎನ್ನುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಸ್ವಪ್ರೇರಿತ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ತಡರಾತ್ರಿ ವರೆಗೆ ಶೋಧನೆ – ಆಕ್ರಮಣಕಾರಿ ದಾಖಲೆಗಳು ವಶ:
ಶೋಧನಾ ವಾರಂಟ್‌ಗಳೊಂದಿಗೆ ತೆರಳಿದ ಲೋಕಾಯುಕ್ತ ತಂಡಗಳು ಕಚೇರಿಗಳಲ್ಲಿ ಇರುವ ನೂರಾರು ಕಡತಗಳನ್ನು ಪರಿಶೀಲಿಸಿ, ಭ್ರಷ್ಟಾಚಾರದ ಸುಳಿವಿರುವ ಕೆಲವು ಪ್ರಮುಖ ದಾಖಲೆಗಳನ್ನು ಜಪ್ತಿ ಮಾಡಿವೆ. ಯಾವ ಕಚೇರಿಯಲ್ಲಿ ಎಷ್ಟು ಅವ್ಯವಹಾರ ನಡೆದಿದೆ ಎಂಬುದರ ಸ್ಪಷ್ಟ ಚಿತ್ರಣ ತನಿಖೆಯ ನಂತರ ಮಾತ್ರ ತಿಳಿದುಬರುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತ್ತೆಯಾದ ಪ್ರಮುಖ ಅವ್ಯವಹಾರಗಳು:
• ಖಾಸಗಿ ಶಾಲೆಗಳ ನೋಂದಣಿ ಮತ್ತು ಮಾನ್ಯತೆ ನವೀಕರಣದಲ್ಲಿ ಮಾರ್ಗಸೂಚಿ ಉಲ್ಲಂಘನೆ
• ಲಂಚಕ್ಕಾಗಿ ಅನಗತ್ಯವಾಗಿ ಶಾಲೆಗಳಿಗೆ ಭೇಟಿ ನೀಡಿ ಕಿರುಕುಳ
• ಸರ್ಕಾರಿ ಯೋಜನೆಗಳ ಅನುಷ್ಠಾನ ಮತ್ತು ಅನುದಾನ ಬಳಕೆಯಲ್ಲಿ ಅಕ್ರಮ
• ಅತಿಥಿ ಶಿಕ್ಷಕರ ಗೌರವ ಧನ ಮಂಜೂರಾತಿಯಲ್ಲಿ ಭ್ರಷ್ಟಾಚಾರ
• ಶಾಲೆಗಳ 100 ಮೀ. ವ್ಯಾಪ್ತಿಯ ತಂಬಾಕು/ಮದ್ಯ ಮಾರಾಟ ನಿಷೇಧ ನಿಯಮ ಉಲ್ಲಂಘನೆಗೆ ಕಣ್ಣಾಮುಚ್ಚಿ ವರ್ತನೆ
• ಶಾಲಾ ಆಟದ ಮೈದಾನ ಮತ್ತು ಕಟ್ಟಡಗಳ ಭೂ ಪರಿವರ್ತನೆಗೆ ಸಂಬಂಧಿಸಿದ ಅಕ್ರಮ ದಾಖಲೆಗಳು ಪತ್ತೆ

ದೂರುಗಳ ಸುರಿಮಳೆ ಕಾರಣ:
ಅಧಿಕಾರಿಗಳು ರಜೆ ಮಂಜೂರಾತಿ, ವೇತನ, ಬಡ್ತಿ, ವರ್ಗಾವಣೆ, ನಿವೃತ್ತಿ ವೇತನ ಮತ್ತು ವಿವಿಧ ಕಡತಗಳ ವಿಲೇವಾರಿಯಲ್ಲಿ ಲಂಚದ ಬೇಡಿಕೆ ಇಟ್ಟು ಶಿಕ್ಷಕರು ಹಾಗೂ ಸಾರ್ವಜನಿಕರನ್ನು ಪೀಡಿಸುತ್ತಿದ್ದಾರೆ ಎಂಬ ದೂರುಗಳು ನಿರಂತರವಾಗಿ ಲೋಕಾಯುಕ್ತಕ್ಕೆ ಬರುತ್ತಿದ್ದವು. ಜೊತೆಗೆ ಅನುಕಂಪದ ಆಧಾರದ ನೌಕರಿ, ವಿದ್ಯಾರ್ಥಿಗಳ ವರ್ಗಾವಣೆ ಪತ್ರ, ಅಂಕಪಟ್ಟಿ ತಿದ್ದುಪಡಿಗಳಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎಂದು ಸೂಚನೆಗಳು ದೊರೆತಿವೆ.

ಈಗಾಗಲೇ ವಶಪಡಿಸಿಕೊಂಡಿರುವ ದಾಖಲೆಗಳ ಪರಿಶೀಲನೆ ಮುಂದುವರಿಯುತ್ತಿದ್ದು, ತನಿಖೆಯ ನಂತರ ಹೆಚ್ಚಿನ ಅಕ್ರಮಗಳ ಕುರಿತು ಸ್ಪಷ್ಟ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";