Live Stream

[ytplayer id=’22727′]

| Latest Version 8.0.1 |

Local News

ಡಿಸೆಂಬರ್ 16ರಂದು ಸುವರ್ಣ ವಿಧಾನಸೌಧದ ಮುಂದೆ ಹಿರಿಯ ನಾಗರಿಕರ ಬೃಹತ್ ಪ್ರತಿಭಟನೆ

ಡಿಸೆಂಬರ್ 16ರಂದು ಸುವರ್ಣ ವಿಧಾನಸೌಧದ ಮುಂದೆ ಹಿರಿಯ ನಾಗರಿಕರ ಬೃಹತ್ ಪ್ರತಿಭಟನೆ

ಬೆಳಗಾವಿ: ಹಿರಿಯ ನಾಗರಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಡಿಸೆಂಬರ್ 16 ರಂದು ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂದೆ ಬೃಹತ್ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಬಿ.ಎ. ಪಾಟೀಲ ತಿಳಿಸಿದ್ದಾರೆ.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅಂದಾಜು 20 ಕೋಟಿ ಹಾಗೂ ಕರ್ನಾಟಕದಲ್ಲಿ 80 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರು ಇದ್ದು, ಇವರಲ್ಲಿ ಸುಮಾರು ಮುಕ್ಕಾಲು ಭಾಗದಷ್ಟು ಜನರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಎಂದರು. ಹೆಚ್ಚಿನ ಹಿರಿಯ ನಾಗರಿಕರು ಗ್ರಾಮೀಣ ಪ್ರದೇಶಗಳಲ್ಲಿ ವಾಸವಿದ್ದು, ವೃದ್ಧಾಪ್ಯದಲ್ಲಿ ದುಡಿಯುವ ಸಾಮರ್ಥ್ಯ ಕಳೆದುಕೊಂಡು ಅನಾರೋಗ್ಯ, ಆರ್ಥಿಕ ಸಂಕಷ್ಟ ಮತ್ತು ಕೌಟುಂಬಿಕ ದೌರ್ಜನ್ಯಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಭಾರತ ಸಂವಿಧಾನವು ಹಿರಿಯ ನಾಗರಿಕರ ರಕ್ಷಣೆ, ಸಾಮಾಜಿಕ ಭದ್ರತೆ ಹಾಗೂ ಆರೋಗ್ಯ ಸಂರಕ್ಷಣೆಗೆ ಒತ್ತು ನೀಡಿದೆ. ಅದರನ್ವಯ ರಾಜ್ಯದಲ್ಲಿ 2007ರಲ್ಲಿ ತಂದೆ-ತಾಯಿ, ಪೋಷಕರು ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಕಾಯ್ದೆ ಜಾರಿಗೆ ಬಂದಿದ್ದರೂ, 16 ವರ್ಷಗಳು ಕಳೆದರೂ ಕಾನೂನಿನಲ್ಲಿ ಒದಗಿಸಿರುವ ಮೂಲಭೂತ ಸೌಲಭ್ಯಗಳನ್ನು ಸರಕಾರ ಸಮರ್ಪಕವಾಗಿ ಜಾರಿಗೆ ತಂದಿಲ್ಲ ಎಂದು ಅವರು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಕಳೆದ 18 ವರ್ಷಗಳಿಂದ ಸಂಘಟನೆಯ ಮೂಲಕ ಎರಡು ಬಾರಿ ರಾಜ್ಯ ಮಟ್ಟದ ಸಮಾವೇಶ, ಮೂರು ಬಾರಿ ಪ್ರತಿಭಟನಾ ರ್ಯಾಲಿ ಹಾಗೂ ಎರಡು ಬಾರಿ ಧರಣಿ ಸತ್ಯಾಗ್ರಹ ನಡೆಸಿ ಸರಕಾರಕ್ಕೆ ಹಲವಾರು ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಆದರೆ ಸರಕಾರ, ಸಂಬಂಧಿಸಿದ ಇಲಾಖೆಗಳ ಸಚಿವರು ಹಾಗೂ ಶಾಸಕರು ಸ್ಪಂದಿಸದೇ ಇರುವದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದರು. ಆದರೂ ಸಂಘವು ರಾಜ್ಯದ ಮೂಲೆಮೂಲೆಯ ಗ್ರಾಮಾಂತರ ಪ್ರದೇಶಗಳ ಹಿರಿಯ ನಾಗರಿಕರನ್ನು ಸಂಘಟಿಸಿ, ನೂರಾರು ಶಾಖೆಗಳ ಮೂಲಕ ಹಿರಿಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.

ಈ ಎಲ್ಲಾ ಚಟುವಟಿಕೆಗಳ ಭಾಗವಾಗಿ, ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿ, ಡಿಸೆಂಬರ್ 16 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸುವರ್ಣ ವಿಧಾನಸೌಧದ ಮುಂದೆ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ ನಡೆಸಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.

ಪ್ರಮುಖ ಬೇಡಿಕೆಗಳಲ್ಲಿ ಎಲ್ಲ ಹಿರಿಯ ನಾಗರಿಕರನ್ನು ‘ರಾಷ್ಟ್ರದ ಸಂಪತ್ತು’ ಎಂದು ಘೋಷಿಸುವುದು, ನಿವೃತ್ತ ರಾಜ್ಯ ಸರ್ಕಾರಿ ನೌಕರರಿಗೆ ಬಾಕಿಯಿರುವ 7ನೇ ವೇತನ ಆಯೋಗದ ಎರಡನೇ ಹಂತದ ಲಾಭಗಳನ್ನು ತಕ್ಷಣ ಬಿಡುಗಡೆ ಮಾಡುವುದು ಸೇರಿದಂತೆ ಇತರ ಹಲವು ಬೇಡಿಕೆಗಳು ಸೇರಿವೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಡಾ. ಲಿಂಗರಾಜ ಅಂಗಡಿ, ಡಾ. ಸುನಂದಾ ಬೆನ್ನೂರ, ಎಂ.ಪಿ. ಕುಂಬಾರ, ಹೇಮಗಿರಿ ಪಟ್ಟಣಶೆಟ್ಟಿ, ಎಸ್.ಕೆ. ಆದಪ್ಪನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ನಿತೀನ ಮೆಣಶಿನಕಾಯಿ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";